ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ನಾಲ್ವರಿಗೆ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಆ ಬಳಿಕ ಆರೋಪಿಗಳನ್ನು ಕೋರ್ಟ್ನಿಂದ ಪರಪ್ಪನ ಅಗ್ರಹಾರ ಜೈಲಿಗೆ ಕರೆತರಲಾಗಿದೆ.
ಪರಪ್ಪನ ಅಗ್ರಹಾರ ಸೇರಿದ ಆರೋಪಿಗಳಿಗೆ ವಿಚಾರಣಾಧೀನ ಕೈದಿ ಸಂಖ್ಯೆಯನ್ನು ಕೂಡ ನೀಡಲಾಗಿದೆ. ದರ್ಶನ್ ಅವರ ವಿಚಾರಣಾಧೀಕ ಕೈದಿ ಸಂಖೆ 6106 ಆಗಿದೆ. ಹಾಗೆಯೇ ಇತರೆ ಆರೋಪಿಗಳಾದ ಧನರಾಜ್ - 6107, ವಿನಯ್ - 6108 ಹಾಗೂ ಪ್ರದೂಶ್ - 6109 ಯುಟಿಪಿ ಸಂಖ್ಯೆ ನೀಡಲಾಗಿದೆ.
ಪ್ರಕರಣದಲ್ಲಿ ಬಂಧಿತರಾಗಿ ಜೈಲುಪಾಲಾಗಿರುವ ಸಹ ಆರೋಪಿಗಳ ಮೇಲೆ ದರ್ಶನ್ ಬಗ್ಗೆ ಅಭಿಮಾನವಿರುವ ವಿಚಾರಣಾಧೀನ ಕೈದಿಗಳು ಹಲ್ಲೆ ಮಾಡುವ ಸಾಧ್ಯತೆಯಿದೆ. ಕೆಲ ವಿಚಾರಣಾಧೀನ ಕೈದಿಗಳ ಹೆಸರಿನ ಬಗ್ಗೆ ಗೋಪ್ಯತೆ ಕಾಪಾಡಿಕೊಂಡಿರುವ ಪೊಲೀಸರು, ಅವರನ್ನು ತುಮಕೂರು ಜಿಲ್ಲಾ ಕಾರಾಗೃಹಕ್ಕೆ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.