ಚಿತ್ರದುರ್ಗ:ರೇಣುಕಾಸ್ವಾಮಿ ಅಪಹರಣಕ್ಕೆ ಬಳಕೆಯಾಗಿದ್ದ ಪ್ರಕರಣದ 8ನೇ ಆರೋಪಿ ರವಿಶಂಕರ್ ಕಾರನ್ನು ಪೊಲೀಸರು ಚಿತ್ರದುರ್ಗದಲ್ಲಿ ಜಪ್ತಿ ಮಾಡಿದ್ದಾರೆ. ಇನ್ನು, ಕೊಲೆ ನಡೆದ ಬಳಿಕ ದರ್ಶನ್ ಹಾಗೂ ಗ್ಯಾಂಗ್ನಿಂದ 5 ಲಕ್ಷ ರೂಪಾಯಿ ಪಡೆದ ಮಾಹಿತಿ ಹಿನ್ನೆಲೆ ಪ್ರಕರಣದ ಆರೋಪಿ ರವಿಶಂಕರ್ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ತಾಲೂಕಿನ ಐನಳ್ಳಿ ಕುರುಬರಹಟ್ಟಿಯಲ್ಲಿರುವ ಆರೋಪಿ ರವಿಶಂಕರ್ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡ ಹೋಗಲಾಗಿತ್ತು. ಅದಕ್ಕೆ ರವಿಶಂಕರ್ ಕಾರನ್ನು ಬಳಕೆ ಮಾಡಲಾಗಿತ್ತು. ಹೀಗಾಗಿ ಪೊಲೀಸರು ಕಾರನ್ನು ಜಪ್ತಿ ಮಾಡಿದರು. ಬಳಿಕ ಬೆರಳಚ್ಚು ತಜ್ಞರು ಕಾರನ್ನು ಪರಿಶೀಲನೆ ನಡೆಸಿದರು. ಗೋವಿಂದರಾಜನಗರ ಠಾಣೆ ಸಿಪಿಐ ಸುಬ್ರಹ್ಮಣ್ಯ ನೇತೃತ್ವದಲ್ಲಿ ರವಿಶಂಕರ್ ವಿಚಾರಣೆ ನಡೆದಿದ್ದು, ಇದರಲ್ಲಿ ರವಿಶಂಕರ್ ಕುಟುಂಬಸ್ಥರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲಾಗಿದೆ.