ಧಾರವಾಡ: "ಸಹಕಾರ ಸಂಸ್ಥೆಗಳು ಬೆಳೆಯಬೇಕು. ಇಲ್ಲಿಗೆ ನಾನೊಬ್ಬ ಮಂತ್ರಿ ಅಂತಾ ಬಂದಿಲ್ಲ. ನಾನೂ ಸಹ ಸಹಕಾರ ಕ್ಷೇತ್ರದಿಂದ ಬೆಳೆದವನು, ಸಹಕಾರ ಸಂಸ್ಥೆಯನ್ನು ಬೆಳೆಸಿಕೊಂಡು ಹೋಗುವುದು ಕಷ್ಟ ಇದೆ. ಡಿ.ಕೆ. ಶಿವಕುಮಾರ್ ಮತ್ತು ಸರ್ಕಾರ ನಿಮ್ಮ ಜೊತೆ ಇದೆ ಎಂದು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಡಿಸಿಎಂ ಹೇಳಿದ್ದಾರೆ.
ರೆಡ್ಡಿ ಸಹಕಾರ ಬ್ಯಾಂಕ್ ಶತಮಾನೋತ್ಸವ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ , "ಇವತ್ತು ನಮಗೆ ಯಲ್ಲಮ್ಮದೇವಿ ದರ್ಶನ ಮಾಡಿಸಿದ್ದಾರೆ. ಪುಸ್ತಕಗಳ ಬಿಡುಗಡೆ ಮಾಡಿಸಿದ್ದಾರೆ. ಇದು ನನ್ನ ಭಾಗ್ಯ. ಸಹಾಯ ಮಾಡಿದವರನ್ನು ನೆನಪಿಸಿಕೊಂಡರೆ ಮಾತ್ರ ಫಲ ಸಿಗುತ್ತದೆ. ಸಹಕಾರ ಸಂಸ್ಥೆಯಿಂದ ರಾಜಕಾರಣಕ್ಕೆ ಬಂದವನು ನಾನು. 1983ರಲ್ಲಿ ನಾನೂ ಸೊಸೈಟಿ ಎಲೆಕ್ಷನ್ಗೆ ನಿಂತಿದೆ. ರಾಜೀವ್ ಗಾಂಧಿ ಅವರು ಆಗ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ನನಗೆ ಕೆ.ಎಚ್. ಪಾಟೀಲರು ಬಿ. ಫಾರ್ಮ್ ನೀಡಿ, ದೇವೇಗೌಡರ ಮೇಲೆ ನೀನು ಫೈಟ್ ಮಾಡುತ್ತೀಯಾ ಎಂದು ಕೇಳಿದ್ದರು. ಆದರೆ ಆಗ ಸೋತಿದ್ದೇನೆ. ಈಗ 8ನೇ ಬಾರಿ ಆಯ್ಕೆಯಾಗಿದ್ದೇನೆ. ಕೆ.ಎಚ್. ಪಾಟೀಲರ ಜೊತೆ ಟಿಕೆಟ್ ಪಡೆದಿದ್ದೇನೆ. ಅವರ ಜೊತೆ ಎಂಎಲ್‌ಎ ಮಂತ್ರಿಯಾಗಿದ್ದೇನೆ. ಹಾಗೆಯೇ ಅವರ ಪುತ್ರ ಹೆಚ್.ಕೆ. ಪಾಟೀಲರ ಜೊತೆಯೂ ಎಂಎಲ್‌ಎ, ಮಂತ್ರಿಯಾದವನು ನಾನು. ಹಾಗೇ ಒಂದೆರಡು ವರ್ಷ ಸಹಕಾರ ಸಚಿವ ಆಗಿದ್ದೇನೆ" ಎಂದು ಡಿಸಿಎಂ ನೆನಪಿಸಿಕೊಂಡರು.
ಬ್ಯಾಂಕಿಂಗ್ ಕ್ಷೇತ್ರಕ್ಕೆ ಶಕ್ತಿ ಬಂದಿದ್ದು ಮನಮೋಹನ್ ಸಿಂಗ್ರಿಂದ:"ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರಿಂದ ನಮ್ಮ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶಕ್ತಿ ಇದೆ. ಅನೇಕ ದೇಶಗಳ ಬ್ಯಾಂಕ್ಗಳು ಮುಳುಗಿ ಹೋಗಿವೆ. ಸತ್ಯ ಸಾಯಿಬಾಬಾ ದುಡ್ಡು, ಬ್ಲಡ್ ಹೇಗೆ ಸರ್ಕ್ಯೂಲೇಟ್ ಆಗುತ್ತಾ ಇರುತ್ತದೋ ಹಾಗೇ ಹಣ ಹರದಾಡುತ್ತ ಇರಬೇಕು. ಮನೆಯಲ್ಲಿಯೇ ಹಣ ಉಳಿದರೆ ಜಿಎಸ್‌ಟಿ, ಕಂದಾಯ ತೆರಿಗೆ ಬರುತ್ತದೆ. ಮನೆಯ ಮಡಕೆಯಲ್ಲಿ ಇಟ್ಟರೆ ಕಳ್ಳರ ಪಾಲಾಗುತ್ತದೆ. ಸಹಕಾರ ತತ್ವದಲ್ಲಿ ಎಲ್ಲವೂ ಸಿಗುತ್ತದೆ. ಎಲ್ಲ ಕ್ಷೇತ್ರದಲ್ಲಿ ಸಹಕಾರ ರಂಗ ಇದೆ. ಹುಕ್ಕೇರಿಯಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರದಿಂದಲೇ ಅನೇಕ ಕಡೆ ಬಸ್ ಸಂಚಾರವೂ ಇದೆ" ಎಂದು ತಿಳಿಸಿದರು.