ಚಿಕ್ಕೋಡಿ: ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ದಶಕಗಳಿಂದ ಹೋರಾಟ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಮೇಲೆ ಒತ್ತಡ ಹಾಕಲು ಪಂಚಮಸಾಲಿ ಸಮಾಜದ ಶಾಸಕರು ಒಟ್ಟಾಗಿ ರಾಜೀನಾಮೆ ನೀಡಬೇಕು ಇದರಲ್ಲಿ ಮೊದಲಿಗ ನಾನಾಗಿ ರಾಜೀನಾಮೆ ಕೊಡುವುದಕ್ಕೆ ಮುಂದೆ ಇದ್ದೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಸೋಮವಾರ ರಾತ್ರಿ ಪಂಚಮಸಾಲಿ ಸಮಾಜದ ಮೀಸಲಾತಿ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನಿಡಬೇಕು ಎಂಬ ನಿಟ್ಟಿನಲ್ಲಿ ದಶಕಗಳಿಂದ ಹೋರಾಟ ನಡೆದಿದೆ. ಕಳೆದ ಐದು ವರ್ಷಗಳಿಂದ ಹೋರಾಟ ತೀವ್ರ ಗತಿಯಲ್ಲಿ ಸಾಗಿದೆ. ಆದರೆ, ಸಮಾಜದ ಶಾಸಕರು ಒಗ್ಗಟ್ಟಿನ ಬಲ ಇಲ್ಲದೇ ಇರೋದರಿಂದ ಮೀಸಲಾತಿಗೆ ವಿಳಂಬವಾಗುತ್ತಿದೆ ಎಂದರು.
ಮೀಸಲಾತಿ ವಿಚಾರದಲ್ಲಿ ಎಲ್ಲರೂ ಶಾಸಕರು ಒಗ್ಗಟ್ಟಾಗಬೇಕು: ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮಿಜಿ ಅವರು ಹಿಂದೆಯೂ ಕೂಡ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಕೆಲವು ನಮ್ಮ ಸಮಾಜದ ಶಾಸಕರು ಸಚಿವ ಸ್ಥಾನಕ್ಕಾಗಿ ಸರ್ಕಾರದ ಮೇಲೆ ಅಷ್ಟೊಂದು ಒತ್ತಡ ಹೇರಿಕೆ ಮಾಡ್ಲಿಲ್ಲ. ನಾನು ಯಾವುದೇ ಸಚಿವ ಸ್ಥಾನಕ್ಕೆ ಆಸೆ ಇಲ್ಲ. ಮೀಸಲಾತಿ ವಿಚಾರದಲ್ಲಿ ಎಲ್ಲರೂ ಶಾಸಕರು ಒಗ್ಗಟ್ಟಾಗಬೇಕು. ಒಟ್ಟಾಗಿ ರಾಜೀನಾಮೆ ಕೊಟ್ರೆ ಯಾವುದೇ ಸರ್ಕಾರವಿರಲಿ ಮೀಸಲಾತಿ ನೀಡುತ್ತದೆ ಎಂದು ಹೇಳಿದರು.