ದಾವಣಗೆರೆ:ಮಲೆನಾಡು ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಇಲಿ ಜ್ವರ ಇದೀಗ ದಾವಣಗೆರೆ ಜಿಲ್ಲೆಯಲ್ಲಿಯೂ ಕೆಲವೆಡೆ ಕಾಣಿಸಿಕೊಂಡಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ದಾವಣಗೆರೆ ಜಿಲ್ಲೆಯಲ್ಲಿ ಇಲಿ ಜ್ವರ ಪ್ರಕರಣಗಳು ಹೆಚ್ಚಿದ ಹಿನ್ನೆಲೆ ಜನರಲ್ಲಿ ಭಯ ಮೂಡಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಪ್ರಕರಣಗಳು ಏರಿಕೆಯಾಗಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
''ಜಿಲ್ಲೆಯಲ್ಲಿ ಕೇವಲ ಏಳು ತಿಂಗಳಲ್ಲಿ (2024 ಏಪ್ರಿಲ್ ತಿಂಗಳಿಂದ ನವೆಂಬರ್ ವರೆಗೆ) ಒಟ್ಟು 42 ಇಲಿ ಜ್ವರದ ಪ್ರಕರಣಗಳು ವರದಿಯಾಗಿವೆ. ಏಪ್ರಿಲ್ನಿಂದ ಅಕ್ಟೋಬರ್ವರೆಗೆ 35 ಪ್ರಕರಣಗಳು ಕಾಣಿಸಿಕೊಂಡಿವೆ. ಇದೀಗ ನವೆಂಬರ್ ತಿಂಗಳಲ್ಲಿ ಈವರೆಗೆ ಒಟ್ಟು ಏಳು ಪ್ರಕರಣಗಳು ಬೆಳಕಿಗೆ ಬಂದಿವೆ. ಜನರು ಭಯ ಪಡುವ ಅವಶ್ಯಕತೆ ಇಲ್ಲ. ಬದಲಾಗಿ ಮುಂಜಾಗ್ರತೆ ಕ್ರಮಗಳನ್ನು ವಹಿಸಬೇಕಾಗುತ್ತದೆ'' ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಷಣ್ಮುಖಪ್ಪ ಎಸ್ ಸಲಹೆ ನೀಡಿದರು.
ದಾವಣಗೆರೆಯಲ್ಲಿ ಹೆಚ್ಚಿದ ಇಲಿ ಜ್ವರ ಆತಂಕ: ರೋಗ ಲಕ್ಷಣಗಳು, ಮುಂಜಾಗ್ರತಾ ಕ್ರಮಗಳ ಬಗ್ಗೆ ವೈದ್ಯರು ಹೇಳಿದ್ದೇನು? (ETV Bharat) ''42 ಜನರ ಪೈಕಿ 40 ಜನರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಈಗಾಗಲೇ ಗುಣಮುಖರಾಗಿದ್ದಾರೆ. ಪ್ರಸ್ತುತ 2 ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ 6 ವರ್ಷಗಳ ಪೈಕಿ ಈ ವರ್ಷವೇ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ'' ಎಂದು ಹೇಳಿದರು.
ಆರೋಗ್ಯ ಅಧಿಕಾರಿಗಳ ಮನವಿ:ಸಾಮಾನ್ಯಜ್ವರ ಎಂದು ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಇಲಿ ಜ್ವರ ಲಕ್ಷಣಗಳು ಕಂಡುಬಂದರೆ, ಅವರ ರಕ್ತದ ಮಾದರಿ ಸಂಗ್ರಹಿಸಿ ಮಣಿಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳಿಸಲಾಗುತ್ತಿದೆ. 24 ಗಂಟೆಯೊಳಗಡೆಯೇ ರಕ್ತ ಪರೀಕ್ಷೆಯ ವರದಿ ಕೈಸೇರುತ್ತಿದೆ. ರೋಗಿಗಳು ಹೆಚ್ಚು ಆತಂಕ ಪಡದೇ ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದು ಡಿಹೆಚ್ಓ ಷಣ್ಮುಖ ಎಸ್. ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದರು.
"ಇಲಿ ಜ್ವರವು ಬ್ಯಾಕ್ಟೀರಿಯಾದಿಂದ ಬರುವ ಜ್ವರ. ಇಲಿ, ಹೆಗ್ಗಣಗಳು ಮಲ, ಮೂತ್ರ ಮಾಡುವುದರಿಂದ, ಅಲ್ಲದೇ ಸೋಂಕಿತ ಇಲಿ ಮುಟ್ಟಿರುವ, ಇಲಿ ಸ್ಪರ್ಶಿಸುವ ಆಹಾರ ಪದಾರ್ಥಗಳು ಸೇವಿಸುವುದ್ದರಿಂದ, ನೀರಿನ ಮುಖಾಂತರ, ಇಲಿ ಓಡಾಡಿದ ಸ್ಥಳದಿಂದ ಈ ಜ್ವರ ಬರುವ ಸಾಧ್ಯತೆ ಇರುತ್ತದೆ. ಈ ವರ್ಷದಲ್ಲಿ ಒಟ್ಟು 42 ಪ್ರಕರಣಗಳು ವರದಿಯಾಗಿವೆ. ಮೊನ್ನೆ ಆದಾಪುರದಲ್ಲಿ ಒಂದು ಪ್ರಕರಣ ಬಂದಿದ್ದು, ಇದೀಗ ನಿಗ ವಹಿಸಲಾಗಿದೆ" ಎಂದರು.
ಇಲಿ, ಹೆಗ್ಗಣಗಳಿಂದ ಸೋಂಕು ಹರಡುತ್ತೆ:ಲೆಪ್ಟೊಸ್ಪೈರಾ ಎಂಬ ಬ್ಯಾಕ್ಟಿರಿಯಾ ಸಾಮಾನ್ಯವಾಗಿ ಸೋಂಕಿತ ಇಲಿ ಹಾಗೂ ಹೆಗ್ಗಣ ಮೂಲಕ ಮನುಷ್ಯರಿಗೆ ಹರಡುತ್ತದೆ. ಇಲಿ, ಹೆಗ್ಗಣದ ಮಲ ಮೂತ್ರದ ಮೂಲಕ ಹೊರಗೆ ಬರುವ ಬ್ಯಾಕ್ಟೀರಿಯಾವು ಮಣ್ಣು ಅಥವಾ ನೀರಿನ ಜೊತೆ ಸೇರಿ ನಂತರ ಮನುಷ್ಯನ ದೇಹ ಸೇರುತ್ತದೆ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಜಿ.ಡಿ ರಾಘವನ್ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದರು.
"ಸೋಂಕಿತ ಇಲಿಗಳು ಆಹಾರ ಪದಾರ್ಥಗಳು, ತರಕಾರಿ ಮೇಲೆ ಓಡಾಡಿ ಮಲ, ಮೂತ್ರ ವಿಸರ್ಜನೆ, ಜೊಲ್ಲು ಬಿಡುತ್ತವೆ. ಸೋಂಕಿತ ಆಹಾರ ಪದಾರ್ಥಗಳು, ತರಕಾರಿ, ನೀರು ಮನುಷ್ಯ ಸೇವಿಸಿದರೆ ಇಲಿ ಜ್ವರ ಬರುತ್ತದೆ. ಲೆಪ್ಟೊಸ್ಪೈರಾ ಬ್ಯಾಕ್ಟೀರಿಯಾದಿಂದ ಚಳಿ ಜ್ವರ, ಕೀಲು ನೋವು, ಕಣ್ಣುಗಳ ನೋವು, ದೇಹ ಹಳದಿ, ಸ್ನಾಯುಗಳಲ್ಲಿ ಸೆಳೆತ, ಕೆಮ್ಮು, ವಾಂತಿಯಾಗುವುದು ಇದರ ಲಕ್ಷಣಗಳಾಗಿವೆ. ಈ ಜ್ವರದಿಂದ ಒಮ್ಮೆಮ್ಮೆ ಮೂತ್ರಪಿಂಡ ಮತ್ತು ಹೃದಯ ಸಂಬಂಧಿತ ತೊಂದರೆ ಆಗಬಹುದು'' ಎಂದು ವಿವರಿಸಿದರು.
ಜಾಗೃತಿ ವಹಿಸಲು ಸಲಹೆ:''ಇಲಿ ಜ್ವರ ಬಂದರೇ ವ್ಯಕ್ತಿ ಸಾವನಪ್ಪುವುದಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಸಾವಿನ ಪ್ರಕರಣ ವರದಿಯಾಗಿಲ್ಲ. ಪ್ರಾಣಿಗಳು ಒಡನಾಟದಲ್ಲಿರುವವರು ಕಲುಷಿತ ನೀರಿನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ರೋಗಾಣುಗಳು ಸಾಕು ಪ್ರಾಣಿಗಳಲ್ಲಿ ಇರುವ ಸಾಧ್ಯತೆ ಇರುವುದರಿಂದ, ಅವುಗಳನ್ನು ಕೆರೆ ಕಟ್ಟೆ ನಿಂತ ನೀರಿನಲ್ಲಿ ಸ್ನಾನ ಮಾಡಿಸಬಾರದು. ಆ ನೀರನ್ನು ಕುಡಿಯಲು ಬಳಸಬಾರದು. ಮಲೀನ ನೀರಿನಲ್ಲಿ ಹಣ್ಣು, ತರಕಾರಿಗಳನ್ನು ತೊಳೆಯಬಾರದು. ಕುದಿಸಿ ಆರಿಸಿ ಸೋಸಿದ ನೀರನ್ನು ಸೇವಿಸಬೇಕು. ಬರಿಗಾಲಿನಲ್ಲಿ ತಿರುಗಾಡಬಾರದು. ಮನೆಗಳನ್ನು ಸ್ವಚ್ಛವಾಗಿಡಬೇಕು. ಹೀಗೆ ವಿವಿಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು'' ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಜಿ.ಡಿ. ರಾಘವನ್ ಸಲಹೆ ನೀಡಿದರು.
ಇದನ್ನೂ ಓದಿ:ದಾವಣಗೆರೆ: 7 ತಿಂಗಳಲ್ಲಿ 135 ನವಜಾತ ಶಿಶು, 28 ತಾಯಂದಿರ ಸಾವು; ಕಾರಣವೇನು?