ಬೆಂಗಳೂರು: "ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕರ್ನಾಟಕ ಬಿಟ್ಟು ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯಬಿದ್ದರೆ ಖಂಡಿತವಾಗಿಯೂ ತಿದ್ದುಪಡಿ ತರಲಾಗುವುದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ಸಮಾಜ ಕಲ್ಯಾಣ ಇಲಾಖೆ ಮತ್ತು ಡಾ.ಬಾಬು ಜಗಜೀವನ್ ರಾಮ್ ಸಂಶೋಧನಾ ಸಂಸ್ಥೆ ವತಿಯಿಂದ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 'ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಭವನ'ವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.
"ಬ್ಯಾಂಕ್ಗಳಲ್ಲಿ, ಕೆ.ಎಸ್.ಎಫ್.ಸಿ, ಉದ್ಯಮಿಗಳಿಗೆ 10 ಕೋಟಿವರೆಗೆ 4% ಬಡ್ಡಿಗೆ ಸಾಲ ದೊರೆಯಬೇಕೆಂಬ ಸೌಲಭ್ಯ ಒದಗಿಸಿದ್ದು ನಮ್ಮ ಸರ್ಕಾರ. ಎಸ್.ಸಿ.ಎಸ್ಪಿ/ಟಿ.ಎಸ್.ಪಿ ಕಾಯ್ದೆಯಡಿ 7(ಡಿ) ಕೈಬಿಡಲು ಸಲಹೆ ಬಂದ ಮೇರೆಗೆ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ಕೈಬಿಡಲಾಗಿದೆ. ಇನ್ನೂ ಬದಲಾವಣೆಗಳು ಅಗತ್ಯವಿದ್ದರೆ ಮಾಡಲಾಗುವುದು. ನಮಗೆ ಯಾವುದೇ ಸಂಪ್ರದಾಯವಾದಿ ಧೋರಣೆಗಳಿಲ್ಲ. ಪರಿಶಿಷ್ಟರ ಸಾಮಾಜಿಕ ನ್ಯಾಯದ ವಿರುದ್ಧವಾದ ನಿಲುವು ಸರ್ಕಾರಕ್ಕಿಲ್ಲ" ಎಂದು ಸ್ಪಷ್ಟಪಡಿಸಿದರು.
ಸಮ ಸಮಾಜ ನಿರ್ಮಿಸಬೇಕು: "ಸಂವಿಧಾನದ ವಿರುದ್ಧವಾಗಿ ಇರುವವರನ್ನು ಪ್ರಶ್ನಿಸಬೇಕು. ಎಲ್ಲಾ ವ್ಯವಸ್ಥೆಗಳಲ್ಲಿ ಎಲ್ಲ ಜನಾಂಗದವರು ಬರಬೇಕು. ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುವ ಕೆಲಸ ನಾವು ಮಾಡುತ್ತೇವೆ. ಬಾಬು ಜಗಜೀವನ್ ರಾಮ್ ಸಂಶೋಧನಾ ಸಂಸ್ಥೆ ವತಿಯಿಂದ ಬೇರೆ ಬೇರೆ ಕೆಲಸಗಳು ಕೂಡ ಆಗಬೇಕು. ಪರಿಶಿಷ್ಟ ಜಾತಿಗೆ ಸೇರಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಬೇಕು. ವಸತಿ ಸೌಲಭ್ಯವನ್ನೂ ಕಲ್ಪಿಸಿದರೆ ಅನುಕೂಲವಾಗುತ್ತದೆ. ಬಾಬು ಜಗಜೀವನ್ ರಾಮ್ ಅವರ ದೂರದೃಷ್ಟಿಯಂತೆ ಸಂಸ್ಥೆಯ ಸದುಪಯೋಗವಾಗಬೇಕು. ಸಮ ಸಮಾಜ ನಿರ್ಮಾಣ ಮಾಡುವತ್ತ ನಾವು ಹೆಜ್ಜೆ ಇಡಬೇಕು" ಎಂದರು.
ಒಳಮೀಸಲಾತಿ ಬಗ್ಗೆ ಕೇಂದ್ರಕೆ ಶಿಫಾರಸು: "ನಮ್ಮ ಸರ್ಕಾರ ಒಳ ಮೀಸಲಾತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯ ಮಾಡಲಾಗುವುದು. ಈ ಭವ್ಯ ಭವನ ಎಲ್ಲರಿಗೂ ಸದುಪಯೋಗವಾಗಲಿ. ಅದಕ್ಕೆ ಅಗತ್ಯವಿರುವ ನೆರವನ್ನು ಸರ್ಕಾರ ನೀಡಲಿದೆ" ಎಂದು ಭರವಸೆ ನೀಡಿದರು.
ಮುಂದುವರೆದ ಸಿಎಂ, "ಭವನದ ನಿರ್ಮಾಣಕ್ಕೆ ಮಾಜಿ ಸಚಿವರಾದ ಆಂಜನೇಯ ಅವರು ಪ್ರಮುಖ ಕಾರಣಕರ್ತರು. ಇಂತಹ ಬೃಹತ್ ಸಂಶೋಧನಾ ಭವನವನ್ನು 5 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಜಗಜೀವನ್ ರಾಮ್ ಹೆಸರಿನಲ್ಲಿ ಬಹುಶಃ ದೇಶದಲ್ಲಿಯೇ ಇಂತಹ ಭವನ ನಿರ್ಮಾಣವಾಗಿರುವುದು ಇದೇ ಮೊದಲು. ಇದು ಹೆಮ್ಮೆಯ ವಿಷಯವಾಗಿದ್ದು, ಇದರ ನಿರ್ವಹಣೆ ಮತ್ತು ಸದುಪಯೋಗವಾಗಬೇಕಿದೆ. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದುವೇ ನಾವು ಬಾಬು ಜಗಜೀವನ್ ರಾಮ್ ಅವರಿಗೆ ಸಲ್ಲಿಸುವ ಗೌರವವಾಗಿದೆ" ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನ: "ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ, ಅವರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬಲು, ಅವರ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನವನ್ನು ಖರ್ಚು ಮಾಡಲು ನಾವು ಹಿಂದಿನ ಬಾರಿ ಅಧಿಕಾರದಲ್ಲಿದ್ದಾಗ ಕಾಯ್ದೆ ರೂಪಿಸಿದ್ದೆವು. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಟ್ಟು ಜನಸಂಖ್ಯೆ ಶೇ.24.01ರಷ್ಟಿದೆ. ಈ ವರ್ಷ ಬಜೆಟ್‌ನಲ್ಲಿ ಅಭಿವೃದ್ಧಿಗಾಗಿ 1.60 ಲಕ್ಷ ಕೋಟಿ ರೂ. ಅನುದಾನವನ್ನು ಒದಗಿಸಿದ್ದು, ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 39,121 ಕೋಟಿ ರೂ. ಒದಗಿಸಿದ್ದೇವೆ. ಈ ಕುರಿತು ಕಾಯ್ದೆ ರಚಿಸದಿದ್ದರೆ, ಇಷ್ಟು ದೊಡ್ಡ ಅನುದಾನವನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ" ಎಂದರು.
ಕೇಂದ್ರದಲ್ಲಿಯೂ ಕಾಯ್ದೆ ಜಾರಿಗೊಳಿಸಬೇಕು: "ನಾವು ಒದಗಿಸಿರುವ ಅನುದಾನ ಅದೇ ವರ್ಷ ಶೇ. 100ರಷ್ಟು ವೆಚ್ಚವಾಗಬೇಕು. ಯಾವುದೇ ಕಾರಣಕ್ಕೂ ಈ ಅನುದಾನ ಲೋಪವಾಗಲು ಅವಕಾಶ ನೀಡಬಾರದು. ಯಾವುದಾದರೂ ಸಕಾರಣದಿಂದ ಅನುದಾನ ಸಂಪೂರ್ಣ ವೆಚ್ಚವಾಗದೇ ಉಳಿದರೆ, ಆ ಅನುದಾನ ಮುಂದಿನ ವರ್ಷಕ್ಕೂ ಮುಂದುವರೆಯುತ್ತದೆ. ಕೇಂದ್ರದಲ್ಲಿಯೂ ಇಂತಹ ಕಾಯ್ದೆಯನ್ನು ಜಾರಿಗೊಳಿಸಲು ಎಲ್ಲರೂ ಒತ್ತಡ ಹೇರಬೇಕು" ಎಂದು ಆಗ್ರಹಿಸಿದರು.
ಇದನ್ನೂ ಓದಿ:ಈ ಹಗರಣಗಳಿಂದ ಸಿಎಂ ಸಿದ್ದರಾಮಯ್ಯನವರ ಬಣ್ಣ ಬಯಲಾಗಿದೆ: ಶೆಟ್ಟರ್ - Muda Scam