ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕ್ನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ವಿಧಾನಸೌಧ ಮುತ್ತಿಗೆಗೆ ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಪ್ರತಿಭಟನಾನಿರತರವನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ರಾಜ್ಯದ ಜನ ಗಮನಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದ ಹಣ ಲೂಟಿ ಹೊಡೆದಿದ್ದರಿಂದ ಜನ ಹೋರಾಟಕ್ಕಿಳಿದಿದ್ದಾರೆ. ಲೂಟಿ ಹೊಡೆದ ಸರ್ಕಾರವನ್ನು ಕಿತ್ತೊಗೆಯಲು ಶಪಥ ಮಾಡಿ ಮಾಡಿದ್ದಾರೆ. 14 ತಿಂಗಳ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಎಲ್ಲಾ ಪರಿಶಿಷ್ಟ ಜಾತಿ, ಪಂಗಡದ ಜನ ಸಂತೋಷಪಟ್ಟರು. ಆದರೆ, ಅಹಿಂದ ಹೆಸರಲ್ಲಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯನವರ ಮತ್ತು ಸಚಿವರ ಬಂಡವಾಳ ಬಯಲಾಗಿದೆ. ಯಾರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬಂದರೋ ಅವರಿಗೆ ವಿಶ್ವಾಸ ದ್ರೋಹ ಬಗೆದಿದ್ದಾರೆ. ಆ ಸಮುದಾಯದ ಹಣ ಕೊಳ್ಳೆಹೊಡೆದು ಚುನಾವಣೆಗಾಗಿ ಹೊರ ರಾಜ್ಯಕ್ಕೆ ಕಳಿಸಿದ್ದಾರೆ ಎಂದು ಸಿಎಂ ಮತ್ತು ಡಿಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದರು.
ರಾಜೀನಾಮೆವರೆಗೂ ಹೋರಾಟ:ಇದು ಬೂಟಾಟಿಕೆಗೋಸ್ಕರ ಮಾಡುತ್ತಿರುವ ಹೋರಾಟವಲ್ಲ. ಎಲ್ಲಿಯವರೆಗೂ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲವೋ, ಎಲ್ಲಿಯವರೆಗೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ವಿಜಯೇಂದ್ರ ಗುಡುಗಿದರು.
ಜಿಲ್ಲೆಗಳಲ್ಲಿ ನಿರಂತರ ಹೋರಾಟ:ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ದಲಿತರ ಹಣವನ್ನು ಗ್ಯಾರಂಟಿಗಳಿಗೆ ಬಳಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು. ಈ ಹಣವನ್ನು ಗ್ಯಾರಂಟಿಗಳಿಗೆ ಬಳಸಲು ಕಾಂಗ್ರೆಸ್ನವರಿಗೆ ನಾಚಿಕೆ ಆಗಬೇಕು. ಹಿಂದಿನಿಂದಲೂ ದಲಿತರ ಹೆಸರಿನಲ್ಲಿ ನಾಟಕ ಮಾಡುತ್ತಾ ಬಂದಿದ್ದು ಈಗಲೂ ಅದನ್ನೇ ಮಾಡುತ್ತಿದ್ದೀರಿ. ರಾಜೀನಾಮೆ ಕೊಡುವವರೆಗೂ ಎಲ್ಲ ಜಿಲ್ಲೆಗಳಲ್ಲಿ ನಿರಂತರ ಹೋರಾಟ ಮಾಡಬೇಕೆಂದು ಕರೆ ನೀಡಿದರು.
ಒಂದು ವಿಕೆಟ್ ಮಾತ್ರವಲ್ಲ, ಟೀಂ ಆಲ್ ಔಟ್ ಆಗಬೇಕು: ಮಾಜಿ ಶಾಸಕ ರಾಜುಗೌಡ ಮಾತನಾಡಿ, ಮೊದಲ ವಿಕೆಟ್ ಅಲ್ಲ, ಇಡೀ ಟೀಂ ಆಲೌಟ್ ಆಗಬೇಕು. ಈ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕಬೇಕು. 187 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಹಡಗನ್ನೇ ನುಂಗುವ ರೀತಿಯಲ್ಲಿ ದುಡ್ಡು ಲೂಟಿ ಹೊಡೆದಿದ್ದಾರೆ. ಈ ಹೋರಾಟ ಇನ್ನೂ ತೀವ್ರಗೊಳಿಸಬೇಕು. ಪ್ರಕರಣ ಬಯಲಾದರೆ ದದ್ದಲ್ ಒಬ್ಬರೇ ಅಲ್ಲ, ವಿಧಾನಸೌಧ ಅರ್ಧ ಕ್ಯಾಬಿನೆಟ್ ಒಳಗೆ ಹೋಗುತ್ತದೆ ಎಂದರು.