ಬೆಂಗಳೂರು:ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಡಿಯುವ ಜನರ ಶೋಷಣೆ, ನಿರುದ್ಯೋಗ ಸಮಸ್ಯೆ, ರೈತ ವಿರೋಧಿ ಕೃಷಿ ನೀತಿ, ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿದೆ ಎಂದು ಆರೋಪಿಸಿ ಶುಕ್ರವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್, ಬಿಜೆಪಿ, ಆರ್‌ಎಸ್‌ಎಸ್ ದೇಶವನ್ನು ಮಾತೃ ಭೂಮಿ ಎಂದು ಹೇಳುತ್ತಾರೆ. ಆದರೆ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಪ್ರಶ್ನಿಸಲು ದಿಲ್ಲಿಗೆ ಹೋದ ರೈತರನ್ನು ಹತ್ತಿಕ್ಕಲು ಅದೇ ಮಾತೃಭೂಮಿಗೆ ಮೊಳೆ ಹೊಡೆದಿದ್ದಾರೆ. ತಂದೆ ಕಷ್ಟಪಟ್ಟು ದುಡಿದ ಆಸ್ತಿಯನ್ನು ಉಡಾಳ ಮಗ ಮಾರಾಟ ಮಾಡಿದಂತೆ ದೇಶದ ಜನರು ಕಟ್ಟಿದ ಸಾರ್ವಜನಿಕ ಸಂಸ್ಥೆಗಳನ್ನು ಪ್ರಧಾನಿ ಮೋದಿ ಮಾರುತ್ತಿದ್ದಾರೆ. ಅದನ್ನು ಕಾರ್ಮಿಕರು ಅರ್ಥ ಮಾಡಿಕೊಂಡು ಈ ಬಾರಿ ಚುನಾವಣೆಯಲ್ಲಿ ಸರಿಯಾದ ಬುದ್ಧಿಯನ್ನು ಮೋದಿ ಸರಕಾರಕ್ಕೆ ಕಲಿಸಬೇಕು ಎಂದರು.
ಕೇಂದ್ರ ಸರ್ಕಾರ ಎಂಎಸ್‌ಪಿ ಜಾರಿಗೊಳಿಸಲಿ:ಸಂಯುಕ್ತ ಹೋರಾಟ ಸಮಿತಿಯ ಬಸವರಾಜು ಮಾತನಾಡಿ, ದೇಶದ ರೈತರಿಗೆ ಬರುತ್ತಿರುವ ಆದಾಯ ಕಡಿಮೆ, ಆದರೆ ರೈತರ ಮೇಲೆ ಅಧಿಕ ಸಾಲದ ಹೊರೆಯಿದೆ. ಕೃಷಿಯನ್ನು ಲಾಭದಾಯಕವಾಗಿಸಲು ಕೂಡಲೇ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಪಡಿಸಬೇಕು. ಕೇಂದ್ರ ಸರಕಾರ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿರುವುದು ಸ್ವಾಗತಾರ್ಹ. ಆದರೆ ಭಾರತ ರತ್ನ ನೀಡಿದ ಮಾತ್ರಕ್ಕೆ ಅವರ ಆಶಯ ಈಡೇರಲು ಸಾಧ್ಯವಿಲ್ಲ. ಸ್ವಾಮಿನಾಥನ್ ಅವರ ಮೇಲೆ ಗೌರವವಿದ್ದರೆ ಎಂಎಸ್‌ಪಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.