ವಿಜಯಪುರ: ಯಾವುದೇ ಕೊಳವೆಬಾವಿ ಕೊರೆಯುವ ಪೂರ್ವದಲ್ಲಿ ಸ್ಥಳೀಯ ಆಡಳಿತದಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕಂದಾಯ, ಶಾಲಾ ಶಿಕ್ಷಣ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ ಹಾಗೂ ಜಿ.ಪಂ ಅಧಿಕಾರಿಗಳೊಂದಿಗೆ ತುರ್ತು ವಿಡಿಯೋ ಸಂವಾದ ಸಭೆ ನಡೆಸಿ ಅವರು ಮಾತನಾಡಿದರು.
ಇಂಡಿ ತಾಲೂಕಿನ ಲಚ್ಯಾಣ ತೋಟದ ಕೊಳವೆಬಾವಿಯಲ್ಲಿ ಸಿಲುಕಿದ್ದ ಮಗುವಿನ ಪ್ರಕರಣ ಮತ್ತೊಮ್ಮೆ ಭವಿಷ್ಯದಲ್ಲಿ ಮರುಕಳಿಸದಿರಲು ಗ್ರಾಮ, ಪಟ್ಟಣ ನಗರ ಯಾವುದೇ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯವ ಮುನ್ನ ರೈತರು, ಸಾರ್ವಜನಿಕರು ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯ. ಸಫಲ/ವಿಫಲವಾದ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚುವ ವ್ಯವಸ್ಥೆಯಾಗಬೇಕು. ಈ ಕುರಿತು ಸ್ಥಳಿಯ ಆಡಳಿತಾಧಿಕಾರಿಗಳು ಸೂಚನಾ ಫಲಕಗಳಲ್ಲಿ ಅಳವಡಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಈಗಾಗಲೇ ಕೊಳವೆಬಾವಿಗಳ ಸುರಕ್ಷತೆ ಕುರಿತಂತೆ ಸರಕಾರದ ಸುತ್ತೋಲೆ ಇದ್ದು ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಗ್ರಾ.ಪಂ ಅಧಿಕಾರಿ, ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ಸರಕಾರದ ಈ ಸುತ್ತೋಲೆ ನಿರ್ದೇಶನಗಳನ್ನು ಪಾಲಿಸಬೇಕು. ಇನ್ನು ಮುಂದೆ ಯಾವುದೇ ಅವಘಡ ಜರುಗಿದಲ್ಲಿ ಸ್ಥಳೀಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಅವರ ವಿರುದ್ದ ಇಲಾಖೆಯಿಂದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ವಾರದೊಳಗಾಗಿ ಜಿಲ್ಲೆಯಲ್ಲಿರುವ ಸರಕಾರಿ ಕೊಳವೆಬಾವಿಗಳ ಮಾಹಿತಿಯನ್ನು ನೀಡಬೇಕು, ಚಾಲ್ತಿಯಲ್ಲಿರುವ ಮತ್ತು ದುರಸ್ತಿಯಲ್ಲಿರುವ ಕುರಿತ ಮಾಹಿತಿ ನೀಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ನಿರಾಕ್ಷೇಪಣಾ ಪತ್ರ ಪಡೆಯದೆ ಕೊಳವೆಬಾವಿಗೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಬಾರದೆಂದು ಸೂಚಿಸಿದರು.