ಹುಬ್ಬಳ್ಳಿ:ರಾಮಭಕ್ತನಿಗಾಗಿ ಶ್ರೀರಾಮಚಂದ್ರ ಕಾಯುತ್ತಿದ್ದ, ಅದರಂತೆ ಇದೀಗ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ರಾಮಮಂದಿರ ಸ್ಥಾಪಿಸುವ ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ, ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ನಗರದ ಗೊಲ್ಲರ ಕಾಲೊನಿಯಲ್ಲಿ ಕಾರ್ಯಕ್ರಮದ ನೇರಪ್ರಸಾರಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇಂದು ಇಡೀ ಜಗತ್ತೆ ಶ್ರೀರಾಮ ಮಂದಿರ ನಿರ್ಮಾಣದ ಸಂಭ್ರಮಾಚರಣೆಯಿಲ್ಲಿದೆ. ನಾವು ಕೂಡಾ ಬೆಳಗ್ಗೆಯಿಂದ ಎಲ್ಲ ದೇವಸ್ಥಾನಗಳಿಗೆ ಭೇಟಿ ನೀಡಿ, ದರ್ಶನ ಪಡೆದುಕೊಂಡಿದ್ದೇನೆ. ಎಲ್ಲೆಡೆ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ ಎಂದು ತಿಳಿಸಿದರು.
ನಾಡಿನಾದ್ಯಂತ ಶ್ರೀರಾಮನ ಸಂಭ್ರಮ ಮನೆ ಮಾಡಿದೆ, ಈ ಸಂಭ್ರಮವನ್ನು ಕೋಟ್ಯಂತರ ಜನರು ಟಿವಿಯ ಮೂಲಕ ವೀಕ್ಷಣೆ ಮಾಡುತ್ತಿದ್ದು, ಸಾವಿರಾರು ಜನರು ಅಯೋಧ್ಯೆಗೆ ಹೋಗಿದ್ದಾರೆ. ನಗರದ ಹಲವೆಡೆ ಎಲ್ಇಡಿ ಸ್ಕ್ರೀನ್ ಹಾಕಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಮ್ಮ ರಾಮ ನಮ್ಮ ಮನೆಗೆ ಬಂದಿದ್ದಾರೆ ಎಂಬ ಭಾವನೆ ಜನರಲ್ಲಿದೆ. ಈ ಮೂಲಕ ಎಲ್ಲರ ಮನೆ ಮನಗಳಲ್ಲಿ ರಾಮ ವಿಜೃಂಭಿಸುತ್ತಿದ್ದಾನೆ. ಈ ಎಲ್ಲ ಕಾರ್ಯಕ್ಕೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ನಿಂದ ತುಷ್ಟೀಕರಣ ರಾಜಕಾರಣ:ರಾಮಮಂದಿರ ಉದ್ಘಾಟನೆ ಹಿನ್ನೆಲೆ ಸರ್ಕಾರ ರಜೆ ನೀಡದ ವಿಷಯಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ರಜೆ ನೀಡದೇ ಇರುವುದಕ್ಕೆ ಇದೇ ಕಾರಣ. ಸಿಎಂ ಸಿದ್ದರಾಮಯ್ಯ ಅವರು ರಜೆ ನೀಡುವ ಕುರಿತು ರಾಹುಲ್ ಗಾಂಧಿ ಅವರನ್ನು ಕೇಳಿರಬಹುದು, ಅವರು ಬೇಡಾ ಎಂದಿದ್ದಾರೆ. ಅದಕ್ಕೆ ರಜೆ ನೀಡದೇ ಇರಬಹುದು ಎಂದು ಹರಿಹಾಯ್ದರು.
ರಾಮಜನ್ಮಭೂಮಿ ಹೋರಾಟ 1980-1981 ರಿಂದ ಆರಂಭ ಆದಾಗಿನಿಂದ ಕಾಂಗ್ರೆಸ್ ಇದೇ ರೀತಿ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಇದೀಗ ಮಂದಿರ ಉದ್ಘಾಟನೆಗೆ ಆಹ್ವಾನ ಆಮಂತ್ರಣ ಪತ್ರಿಕೆ ನೀಡಿದರೂ ಕೂಡ ಬರುವುದಿಲ್ಲ ಎನ್ನುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನೆ ಮಾಡಿದರು.
ಆರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅಯೋಧ್ಯೆಗೆ ಹೋಗಲ್ಲಾ ಎಂದು ಹೇಳಿದ್ದರು. ಬಳಿಕ ಜನರ ಭಾವನೆ ತಿಳಿದು ಅಯೋಧ್ಯೆಗೆ ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ. ಇದು ನಿಜವಾದ ಭಕ್ತಿ ಅಲ್ಲ, ಹಿಂದೂ ವಿರೋಧಿ ಸಿದ್ದರಾಮಯ್ಯ ಎನ್ನುವುದು ಈ ಮೂಲಕ ತಿಳಿಯುತ್ತದೆ ಎಂದು ಪ್ರಹ್ಲಾದ್ ಜೋಶಿ ಕುಟುಕಿದರು.