ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಬಿಜೆಪಿಗೆ ಬಂದಿರುವುದು ಸಂತೋಷವಾಗಿದೆ. ಈ ವಿಷಯ ಕೇಳಿ ಬಹಳ ಖುಷಿ ಕೂಡ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವೇಳೆ ಅನುಪಸ್ಥಿತಿಗೆ ವಿಶೇಷ ಅರ್ಥ ಬೇಕಿಲ್ಲ. ಇನ್ನೊಂದು ಅರ್ಧ ಗಂಟೆಯಲ್ಲಿ ಜಗದೀಶ್ ಶೆಟ್ಟರ್ ಪಕ್ಷ ಸೇರ್ಪಡೆ ಆಗುತ್ತಾರೆ ಎಂದು ರಾಷ್ಟ್ರೀಯ ಅಧ್ಯಕ್ಷರು ಫೋನ್ ಮಾಡಿ ಹೇಳಿದ್ದರು. ನಾನು ಉಪರಾಷ್ಟ್ರಪತಿಗಳ ಜೊತೆಗಿನ ಸಭೆಯಲ್ಲಿದ್ದ ಕಾರಣ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ಶೆಟ್ಟರ್ ಬಿಜೆಪಿಯಲ್ಲೇ ಇದ್ದವರು. ಅವರು ಬಂದಿದ್ದು ಪಕ್ಷಕ್ಕೆ ಒಳ್ಳೆಯದಾಗುತ್ತದೆ, ನನಗೂ ಸಂತಸವಾಗಿದೆ. ಆದರೆ, ಷರತ್ತುಗಳ ಬಗ್ಗೆ ನನಗೆ ತಿಳಿದಿಲ್ಲ. ಅವರು ಆಗಮನಕ್ಕೆ ನನ್ನ ವಿರೋಧವಿಲ್ಲ. ಇದ್ದಿದ್ದರೆ ಹೇಳುತ್ತಿದೆ ಎಂದು ಮಾಧ್ಯಮದವರ ಕೆಲವು ಪ್ರಶ್ನೆಗಳಿಗೆ ಜೋಶಿ ಉತ್ತರಿಸಿದರು.
ಅವರು ಪಕ್ಷಕ್ಕೆ ವಾಪಸ್ ಆಗುವ ಬಗ್ಗೆ 6 ತಿಂಗಳ ಹಿಂದೆಯೇ ಹೇಳಿದ್ದೆ. ನಾನು ಇದನ್ನು ಯಾವುದೇ ವ್ಯಂಗ್ಯದಿಂದ ಹೇಳುತ್ತಿಲ್ಲ. ಶೆಟ್ಟರ್ ಆಗಮನ ವಿಚಾರದಲ್ಲಿ ಸ್ಥಳೀಯ ನಾಯಕರನ್ನು ನಿರ್ಲಕ್ಷ್ಯ ಮಾಡಿಲ್ಲ, ಇದನ್ನು ಅವರ ಗಮನಕ್ಕೂ ತಂದಿದ್ದೇನೆ. ಸದ್ಯ ಅವರ ಆಗಮನ ಖುಷಿ ತರಿಸಿದೆ. ಭಾಗದಲ್ಲಿ ಎಲ್ಲರೂ ಒಂದುಗೂಡಿ ಪಕ್ಷ ಬಲವರ್ಧನೆ ಮಾಡುತ್ತೇವೆ. ನಮಗೆ ಲಿಂಗಾಯತ ಸೇರಿದಂತೆ ಎಲ್ಲ ಸಮುದಾಯಗಳೂ ಬೇಕು. ಇನ್ನು ಲಕ್ಷ್ಮಣ ಸವದಿ ಅವರಲ್ಲಿ ಬಿಜೆಪಿಯ ವೈಚಾರಿಕ ರಕ್ತವಿದೆ. ಅವರು ಪಕ್ಷಕ್ಕೆ ಬಂದ್ರೆ ಖುಷಿ. ಗಾಲಿ ಜನಾರ್ದನರೆಡ್ಡಿ ಕೂಡಾ ಓರಿಜನಲ್ ಬಿಜೆಪಿಯಾಗಿದ್ದು, ಅವರು ಕೂಡ ಬರಬಹುದು. ಇವತ್ತಿನ ಕಾರ್ಯಕಾರಿಣಿಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ವೆಲಕಮ್ ಬ್ಯಾಕ್ ಹೇಳಿದ್ದೇನೆ ಎಂದರು.
ಧಾರವಾಡ ಲೋಕಸಭೆ ಚುನಾವಣೆ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜೋಶಿ ಬಿಟ್ಟರೆ ಇನ್ಯಾರು ಅನ್ನೋ ಮೂಲಕ ಪರೋಕ್ಷವಾಗಿ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡರು. ನಮ್ಮ ಪಕ್ಷ ಈಗಾಗಲೇ ಚುನಾವಣೆ ತಯಾರಿ ನಡೆಸಿದೆ. ಅಭ್ಯರ್ಥಿ ಹೆಸರು ಘೋಷಣೆ ಮುನ್ನ ನಾನ ಏನೂ ಮಾತಾಡಲ್ಲ. ಆದರೆ ನಾನು ಚುನಾವಣೆ ತಯಾರಿ ನಡೆಸಿದ್ದೇನೆ. ಧಾರವಾಡ ಲೋಕಸಭೆ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಇದೇ ವೇಳೆ ವಾಗ್ದಾಳಿ ನಡೆಸಿದರು.