ಧಾರವಾಡ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಸಮಾಜದ ಮೇಲೆ ಹಲ್ಲೆ ಮಾಡುವುದು ಸಹಜವಾಗಿದೆ. ಜೈ ಶ್ರೀರಾಮ್ ಎನ್ನುವವರ ಮೇಲೆ ಹಲ್ಲೆ ಆಯ್ತು. ಇದಕ್ಕಿಂತ ಮುಂಚೆ ಅಂಗಡಿಯಲ್ಲಿ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಹಲ್ಲೆ ನಡೆಯಿತು. ಆದರೆ ಹಲ್ಲೆಯಾದವರ ಮೇಲೆ ಕೇಸ್ ಹಾಕಲಿಲ್ಲ, ಇದರ ಬದಲಿಗೆ ಹಲ್ಲೆ ಮಾಡಿಸಿಕೊಂಡವರ ಮೇಲೆಯೇ ಪ್ರಕರಣ ದಾಖಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಈ ಕುರಿತು ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಪಿಎಫ್‌ಐ, ಎಸ್‌ಡಿಪಿಐ ಜೊತೆಗೂಡಿ ಗಲಾಟೆ ಮಾಡಿದ್ದರು. ಈ ದಂಗೆಯಲ್ಲಿ ಬಂಧನಕ್ಕೊಳದವರ ಬಿಡುಗಡೆ ಮಾಡಿಸಿದರು. ದಲಿತ ಸಮುದಾಯಕ್ಕೆ ಸೇರಿದ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿ ನಡೆಸಿ ಅವರ ಮೇಲೆ ಹಲ್ಲೆ ಮಾಡಿ ಮನೆ ಸುಟ್ಟು ಹಾಕಿದ್ದರು. ಈ ಪ್ರಕರಣದಲ್ಲೂ ಬಂಧನಕ್ಕೊಳಗಾದ ಆರೋಪಿಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಬಿಡುಗಡೆ ಮಾಡಿಸಿತು. ಪಾಕ್ ಪರ ಜಿಂದಾಬಾದ್ ಅಂದಾಗಲೂ, ಅವರು ಹಾಗೆ ಅಂದಿಲ್ಲ ಎಂದು 8 ದಿನಗಳ ಬಳಿಕ ಒಬ್ಬನನ್ನು ಅರೆಸ್ಟ್ ಮಾಡಿದರು. ರಾಮೇಶ್ವರಂ ಕೆಫೆ ದಾಳಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದರು. ಅದೊಂದು ಸಿಲಿಂಡರ್ ಬ್ಲಾಸ್ಟ್ ಎಂದು ಹೇಳಿದ್ದರು. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎಂಬ ಯುವತಿಯನ್ನು ಹತ್ಯೆ ಮಾಡಲಾಗಿದೆ. ನಿನ್ನೆ ಯಾದಗಿರಿಯಲ್ಲಿ ದಲಿತ ಯುವಕನ ಕೊಲೆಯಾಗಿದೆ. ಅಪರಾಧಿಗಳಿಗೆ ನಮ್ಮ ಪರವಾದ ಸರ್ಕಾರ ಎಂಬ ಮನೋಭಾವ ಬಂದಿದೆ ಎಂದರು.