ಮೈಸೂರು: ನೀತಿ ಆಯೋಗ ಬಡತನ ಶೇ.5ಕ್ಕಿಂತ ಕೆಳಗೆ ಇಳಿದಿದೆ ಎಂದು ಹೇಳಿರುವುದು ಸತ್ಯವಲ್ಲ. ವಾಸ್ತವವಾಗಿ ಬಡತನ ಹಾಗೂ ನಿರುದ್ಯೋಗ ಮೊದಲಿಗಿಂತ ಹೆಚ್ಚಾಗಿದೆ ಎಂದು ಎಐಸಿಸಿ ವಕ್ತಾರ ಡಾ. ಅನ್ಸುಲ್ ಅವಿಜಿತ್ ಆರೋಪಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳ ಮೂಲಕ ಬಿಜೆಪಿ ಮತಯಾಚಿಸುತ್ತಿದೆ. ಆದರೆ ನೈಜ ನಿರುದ್ಯೋಗ, ಬಡತನ, ಬೆಲೆಯೇರಿಕೆ ವಿಷಯಗಳನ್ನು ಮರೆಮಾಚಿದೆ ಎಂದರು.
ಈ ಬಾರಿಯ ಸಾರ್ವತ್ರಿಕ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸಾಮಾಜಿಕ ನ್ಯಾಯದ ವಿಷಯ ಎತ್ತಿಕೊಂಡು ಬಂದಿದ್ದರೆ, ಬಿಜೆಪಿ ಎಂದಿನಂತೆ ರಾಮಮಂದಿರದಂತಹ ಭಾವನಾತ್ಮಕ ವಿಷಯ ಇಟ್ಟುಕೊಂಡು ನಿರುದ್ಯೋಗ, ಬಡತನ, ಬೆಲೆಯೇರಿಕೆ ಮೊದಲಾದ ನೈಜ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯುತ್ತಿದೆ ಎಂದು ಅವರು ದೂರಿದರು.
ಕೇಂದ್ರದ ಹಣ ಉದ್ಯಮಿಗಳ ಪಾಲು: ಕೇಂದ್ರದ ಖಜಾನೆಯಲ್ಲಿರುವ ಬಡಜನರ ಹಣ ನೈಜ ಫಲಾನುಭವಿಗಳನ್ನು ತಲುಪುತ್ತಿಲ್ಲ. ಅದು ಉದ್ಯಮಿಗಳ ಪಾಲಾಗುತ್ತಿದೆ. ಹೀಗಾಗಿ ಅದು ಅರ್ಹರನ್ನು ತಲುಪಬೇಕೆಂದು ಕಾಂಗ್ರೆಸ್ ಹೋರಾಡುತ್ತಿದೆ. ಈ ಬಾರಿಯ ಭಾರತ್ ಜೋಡೋ ನ್ಯಾಯ ಯಾತ್ರೆ ಸಹಾ ಇದೇ ಉದ್ದೇಶ ಹೊಂದಿದೆ. ಇದಲ್ಲದೇ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿಯೂ ಇದೇ ಕಾರಣಕ್ಕಾಗಿ ಹೋರಾಟ ಮಾಡಿದರು ಎಂದರು.
ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸುವದಾಗಿ ಬಿಜೆಪಿ ನೀಡಿದ್ದ ಭರವಸೆ ಹುಸಿಯಾಗಿದೆ. ಹೀಗಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವರದಿ ಜಾರಿಗೊಳಿಸುತ್ತದೆ ಎಂದು ಡಾ. ಅನ್ಸುಲ್ ಹೇಳಿದರು.