ಹುಬ್ಬಳ್ಳಿ :ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರೌಡಿಗಳ ಹಾವಳಿ ಒಂದೆಡೆಯಾದ್ರೆ, ಮತ್ತೊಂದೆಡೆ ಡ್ರಗ್ಸ್, ಗಾಂಜಾ ಮಾಫಿಯಾದಿಂದ ಕೊಲೆಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ ಅವಳಿ ನಗರ ಪೊಲೀಸರು ಪೊಲೀಸ್ ಕಮಿಷನರ್ ಆದೇಶದಂತೆ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಮಾರಾಕಾಸ್ತ್ರ, ಗಾಂಜಾ ಹಾಗೂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಮುಂದುವರೆದ ಪೊಲೀಸ್ ಕಾರ್ಯಾಚರಣೆ (ETV Bharat) ಅದರಲ್ಲೂ ನೇಹಾ, ಅಂಜಲಿ ಹತ್ಯೆ ಬಳಿಕ ಎಚ್ಚೆತ್ತ ಹುಬ್ಬಳ್ಳಿ-ಧಾರವಾಡ ಪೊಲೀಸರು ಇಂದು ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನವನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಮಿಯುಲ್ಲಾ ಕೆ ನೇತೃತ್ವದಲ್ಲಿ ನಲವತ್ತಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿ ರೌಡಿಶೀಟರ್‌ಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅಕ್ರಮ ಚಟುವಟಿಕೆಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
ರೌಡಿಶೀಟರ್ ಮನೆಗಳ ಮೇಲೆ ಪೊಲೀಸ್ ದಾಳಿ (ETV Bharat) ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಸಿಸಿಬಿ ದಾಳಿ : ಇಬ್ಬರ ಬಂಧನ- ಹುಬ್ಬಳ್ಳಿ ದಕ್ಷಿಣ ಉಪವಿಭಾಗದ ಹುಬ್ಬಳ್ಳಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡಶೆಡ್ ರೋಡ್ ಹತ್ತಿರ ಅಕ್ರಮ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿಗಳಿಬ್ಬರ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಸಿಸಿಬಿ ವಿಭಾಗದ ಎಸಿಪಿ ಎಸ್. ಟಿ ಒಡೆಯರ್ ಅವರ ನೇತೃತ್ವದಲ್ಲಿ ಸಿಸಿಬಿ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಅಲಿ ಎ. ಶೇಖ್ ಮತ್ತವರ ಸಿಬ್ಬಂದಿಯನ್ನು ಒಳಗೊಂಡ ತಂಡವು ಕ್ಷಿಪ್ರ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 20,000/- ರೂ ಮೌಲ್ಯದ 200 ಗ್ರಾಂ ಗಾಂಜಾ ಹಾಗೂ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾಕೀಬ್ ತಂದೆ ಮಾಬೂಸಾಬ್ ಕೊಪ್ಪಳ ( 21), ಭರತ ತಂದೆ ವಿರುಪಾಕ್ಷಿ ಭಟ್ಟೂರ (21 ) ಬಂಧಿತರಾಗಿದ್ದು, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ :₹2.74 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ: ಬಂಧಿತರಲ್ಲಿ ಮೂವರು ವಿದೇಶಿಗರು - CCB Police Raid