ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಬಂಧಿತರಾಗಿದ್ದ ಮೂವರು ಆರೋಪಿಗಳು ಕಾಂಗ್ರೆಸ್ ಬೆಂಬಲಿಗರಾಗಿದ್ದು, ಶಾಸಕರಿಂದ ಕ್ಷೇತ್ರಕ್ಕೆ ಅವಮಾನವಾಗಿದೆ ಎಂದು ಭಾವಿಸಿ ಹೀಗೆ ಮಾಡಿದ್ದರು ಎಂಬುದು ನಂದಿನಿ ಲೇಔಟ್ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.
ಕಳೆದ ಡಿ. 25ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಹಿನ್ನೆಲೆ ಲಕ್ಷ್ಮಿದೇವಿನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ಮುನಿರತ್ನ ಬರುವಾಗ ಅವರ ಮೇಲೆ ಮೊಟ್ಟೆ ದಾಳಿಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ಮೂವರನ್ನ ಬಂಧಿಸಿ ಎಲ್ಲಾ ಆಯಾಮದಲ್ಲಿ ವಿಚಾರಣೆ ನಡೆಸಿದಾಗ ಕಾಂಗ್ರೆಸ್ ಬೆಂಬಲಿಗರಾಗಿರುವುದನ್ನ ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ. ಶಾಸಕರಿಂದಾಗಿಯೇ ಕ್ಷೇತ್ರಕ್ಕೆ ಅವಮಾನವಾಗಿದೆ ಎಂದು ಭಾವಿಸಿ ಮೊಟ್ಟೆ ದಾಳಿ ನಡೆಸಿದ್ದರು . ಅಲ್ಲದೇ ಕೃತ್ಯದ ಹಿಂದೆ ರಾಜಕೀಯ ಪ್ರಭಾವಿಗಳ ಕೈವಾಡ ಇಲ್ಲದಿರುವುದು ತನಿಖೆ ವೇಳೆ ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲ, ಬೆಂಬಲಿಗರು:ಕಾರ್ಯಕ್ರಮ ಮುಗಿಸಿ ಹೊರಬರುವಾಗ ಗುಂಪಿನಲ್ಲಿ ಬಂದು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮೇಲೆ ಮೊಟ್ಟೆ ದಾಳಿ ಎಸಗಿದ್ದಾರೆ. ಕೃತ್ಯದ ಹಿಂದೆ ರಾಜಕೀಯ ನಾಯಕರ ಕೈವಾಡವಿದೆ ಎಂದು ಮುನಿರತ್ನ ಅವರು ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಲಗ್ಗೆರೆಯ ಭೈರವೇಶ್ವರ ನಗರದ ಕೆ. ವಿಶ್ವನಾಥ್, ಪಾಪರೆಡ್ಡಿಪಾಳ್ಯದ ವಿಶ್ವಕಿರಣ್ ಹಾಗೂ ಲಗ್ಗೆರೆ ಅಶೋಕ್ ಕುಮಾರ್ ಎಂಬುವರನ್ನ ಪೊಲೀಸರು ಬಂಧಿಸಿದ್ದರು. ಕೃತ್ಯದ ಹಿಂದೆ ಮಾಜಿ ಸಂಸದ ಡಿ. ಕೆ ಸುರೇಶ್ ವಿರುದ್ಧ ಕೈವಾಡವಿರುವ ಆರೋಪ ಕೇಳಿ ಬಂದಿತ್ತು.
ಆರೋಪಿಗಳ ವಿಚಾರಣೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಕಾರ್ಯಕರ್ತರಾಗದೇ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು. ಅತ್ಯಾಚಾರ, ಜೀವಬೆದರಿಕೆ ಹಾಗೂ ಜಾತಿನಿಂದನೆಯಡಿ ಮುನಿರತ್ನ ಬಂಧನ ಬಳಿಕ ಆರೋಪಿಗಳು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಶಾಸಕರ ನಡತೆಯಿಂದ ಕ್ಷೇತ್ರದ ಮತದಾರರಿಗೆ ಅವಮಾನವಾಗಿದೆ ಎಂದು ಆರೋಪಿಗಳು ಭಾವಿಸಿ ಕೃತ್ಯವೆಸಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.