ಬೆಳಗಾವಿ: ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ದಿಗ್ವಿಜಯ ಸಾಧಿಸಿ ಈ ವರ್ಷಕ್ಕೆ 200 ವರ್ಷ ತುಂಬುತ್ತಿದೆ. ಈ ಸವಿನೆನಪಿಗೋಸ್ಕರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ಎಂದು ಹೆಸರು ಇಡಬೇಕು. ಅದೇ ರೀತಿ ವಿಮಾನ ನಿಲ್ದಾಣ ಮುಂದೆ ಚೆನ್ನಮ್ಮನ ಬೃಹತ್ ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು.
ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿರುವ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ವಿಮಾನ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಈರಣ್ಣ ಕಡಾಡಿ, ಹೊಸ ಟರ್ಮಿನಲ್ ಮೂಲಕ ಬೆಳಗಾವಿ ವಿಮಾನ ನಿಲ್ದಾಣ ಆಕರ್ಷಣೀಯ ಸ್ಥಾನವಾಗಿ ಹೊರಹೊಮ್ಮಲಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯಲ್ಲಿ ಇಲ್ಲೂ ವಿಶೇಷ ವಿನ್ಯಾಸ ಮಾಡಬೇಕು.
ಕೇಂಪೇಗೌಡರ ಬೃಹತ್ ಮೂರ್ತಿಯಂತೆ ಬೆಳಗಾವಿಯಲ್ಲಿ ರಾಣಿ ಚೆನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಅಲ್ಲದೇ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮನ ಹೆಸರು ಇಡುವ ಮೂಲಕ ಗೌರವ ಸಲ್ಲಿಸಬೇಕಿದೆ. 357 ಕೋಟಿ ರೂ. ಅನುದಾನದಲ್ಲಿ 4 ಏರೋ ಬ್ರಿಡ್ಜ್ ಇರಲಿದ್ದು, 8 ಎಕ್ಸಲೇಟರ್, ಲಿಫ್ಟ್ಗಳ ಅಳವಡಿಕೆ, 500 ಕಾರು, 200 ಬೈಕ್ ನಿಲ್ಲುವ ವ್ಯವಸ್ಥಿತ ಪಾರ್ಕಿಂಗ್ ನಿರ್ಮಿಸಲಿದ್ದೇವೆ. ರಾತ್ರಿ ಕೂಡ ವಿಮಾನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಚಹ, ಟೀ ಮಾರಾಟ, ಸ್ಥಳೀಯ ವಸ್ತುಗಳ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾವುದು ಎಂದು ಈರಣ್ಣ ಕಡಾಡಿ ತಿಳಿಸಿದರು.
ಬೆಳಗಾವಿ ಐತಿಹಾಸಿಕ ನೆಲೆ. ಇಲ್ಲಿ ವಾಯುಸೇನೆ, ಮರಾಠಾ ಲಘು ಪದಾತಿ ದಳ, ಕಮಾಂಡೋ ಸೆಂಟರ್, ಐಟಿಬಿಪಿ ಸೇರಿ ಮತ್ತಿತರೆ ಸೇನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ, ಮೂರು ರಾಜ್ಯಗಳ ಕೇಂದ್ರ ಬಿಂದುವಾಗಿರುವ ಬೆಳಗಾವಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ ಎಂದ ಈರಣ್ಣ ಕಡಾಡಿ, ಬೆಂಗಳೂರು, ಮಂಗಳೂರು ಬಿಟ್ಟರೆ ಮೂರನೇ ಸ್ಥಾನದಲ್ಲಿ ಬೆಳಗಾವಿ ವಿಮಾನ ನಿಲ್ದಾಣವಿದೆ. ಒಂದಿಷ್ಟು ದಿನ ಎರಡನೇ ಸ್ಥಾನದಲ್ಲಿ ಇದ್ದೆವು. ಉಡಾನ್ ಯೋಜನೆ ಬಳಿಕ ಕೆಲವೊಂದು ವಿಮಾನಯಾನ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸಿವೆ. ಸೇವೆ ಹೆಚ್ಚಿಸುವ ಬಗ್ಗೆ ಮನವಿ ಮಾಡಿಕೊಂಡಿದ್ದೇವೆ. ರೈಲು, ರಸ್ತೆ, ವಿಮಾನ ಸೇವೆಯಿಂದ ಮುಂದಿನ ದಿನಗಳಲ್ಲಿ ಬೆಳಗಾವಿ ಲಾಜಿಸ್ಟಿಕ್ ಹಬ್ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಈರಣ್ಣ ಕಡಾಡಿ ಅಭಿಪ್ರಾಯಪಟ್ಟರು.