ಬೆಂಗಳೂರು: ಕೃತಿ ಚೌರ್ಯ ಆರೋಪ ಕುರಿತಂತೆ ಬೈವೀವ್ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್‌ನ ನಿರ್ಮಾಣದ ಅಜಯ್ ದೇವಗನ್ ಅಭಿನಯದ 'ಮೈದಾನ್' ಚಲನಚಿತ್ರ ಪ್ರದರ್ಶನಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಅಲ್ಲದೇ, ಒಟಿಟಿ ಸೇರಿದಂತೆ ಯಾವುದೇ ವಿಧಾನದಲ್ಲಿ ಯಾವುದೇ ಭಾಷೆಯಲ್ಲೂ ಸಿನಿಮಾ ಪ್ರದರ್ಶನ ಮಾಡಬಾರದು ಎಂದು ಮೈಸೂರು ಸಿವಿಲ್ ಕೋರ್ಟ್ ನೀಡಿದ್ದ ಆದೇಶಕ್ಕೆ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ಮುಂಬೈನ ಬೈವೀವ್ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್‌ನ ಬೋನಿ ಕಪೂರ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯಪೀಠ ಈ ಮಧ್ಯಂತರ ಆದೇಶ ಮಾಡಿದೆ. ಗುರುವಾರ ಹೈಕೋರ್ಟ್ಗೆ ರಜೆ ಇದ್ದರೂ ತುರ್ತು ವಿಚಾರ ಎಂದು ಮಂಡನೆ ಮಾಡಿ, ವಿಚಾರಣೆ ನಡೆಸುವಂತೆ ಅರ್ಜಿದಾರರು ಕೋರಿದ್ದರು. ಅದರಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ: ಭಾರತೀಯ ಫುಟ್ಬಾಲ್ ಕಥಾಹಂದರ ಹೊಂದಿರುವ ಚಿತ್ರಕತೆ ರೂಪಿಸಿದ್ದ ಮೈಸೂರಿನ ಅನಿಲ್ ಕುಮಾರ್ ಅವರು ತಮ್ಮ ಸಿನಿಮಾದ ಕತೆಯ ಸಾರಾಂಶ, ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣ ಲಿಂಕ್ಡ್ಇನ್ನಲ್ಲಿ ಪ್ರಕಟಿಸಿದ್ದರು. ಇದನ್ನು ನೋಡಿ ಜಾಹೀರಾತು ನಿರ್ದೇಶಕ ಮತ್ತು ಸಿನಿಮಾ ನಿರ್ದೇಶಕ ಎಂದು ಹೇಳಿಕೊಂಡಿದ್ದ ಮೂಲ ದಾವೆಯಲ್ಲಿ ಮೂರನೇ ಪ್ರತಿವಾದಿ ಸುಖದಾಸ್ ಸೂರ್ಯವಂಶಿ ಅವರು ಅನಿಲ್ ಕುಮಾರ್ ಸಂಪರ್ಕಕ್ಕೆ ಬಂದಿದ್ದರು. ಅನಿಲ್ ಕುಮಾರ್ ಪೋಸ್ಟರ್ ಆಕರ್ಷಕವಾಗಿದ್ದು, ಕತೆಯ ಬಗ್ಗೆ ತಿಳಿದುಕೊಳ್ಳಲು ಮತ್ತು ಬಾಲಿವುಡ್ ಪ್ರಮುಖ ಸಿನಿಮಾಕರ್ತರನ್ನು ಭೇಟಿ ಮಾಡಿಸಲು ಮುಂಬೈಗೆ ಬರುವಂತೆ ಆಹ್ವಾನಿಸಿದ್ದರು.