ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ವ್ಯಾಪ್ತಿಯಲ್ಲಿ ಸದ್ಯ ಜೀವಂತವಾಗಿ ಉಳಿದಿರುವ 183 ಕೆರೆಗಳ ಪೈಕಿ 122 ಕೆರೆಗಳು ಖಾಸಗಿಯವರಿಂದ ಒತ್ತುವರಿಯಾಗಿವೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಹೇಳಿದೆ.
ಬೆಂಗಳೂರಿನ ಕೆರೆಗಳು ಮತ್ತು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ ಅವುಗಳನ್ನು ರಕ್ಷಿಸಲು ಸರ್ಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಬೇಕೆಂದು 2014ರಲ್ಲಿ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.
ವಿಚಾರಣೆ ವೇಳೆ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದು ಅಂದಾಜು ಲೆಕ್ಕಾಚಾರವಾಗಿದ್ದು, ಖಚಿತ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಂದಾಜಿನ ಪ್ರಕಾರ ಬಿಬಿಎಂಪಿಯಲ್ಲಿ ಸದ್ಯ 183 ಕೆರೆಗಳಿದ್ದು, ಅವುಗಳ ವಿಸ್ತೀರ್ಣ 5,094 ಎಕರೆ ಇದೆ. ಇದರಲ್ಲಿ ಖಾಸಗಿಯವರಿಂದ 122 ಕೆರೆಗಳಲ್ಲಿ ಒತ್ತುವರಿಯಾಗಿದ್ದು, ಅದರ ವಿಸ್ತೀರ್ಣ 235 ಎಕರೆ ಇದೆ. ಇದಲ್ಲದೆ ರಸ್ತೆ, ಸರ್ಕಾರಿ ಕಟ್ಟಡ, ಸ್ಮಶಾನ, ಧಾರ್ಮಿಕ ಸ್ಥಳಗಳು, ಸಾರ್ವಜನಿಕ ಕಟ್ಟಡಗಳು, ಅಘೋಷಿತ ಸ್ಲಂ, ರೈಲ್ವೆ ಹಳಿ ಇತ್ಯಾದಿ ರೂಪದಲ್ಲಿ ಕೆರೆಗಳ ಒತ್ತುವರಿಯಾಗಿದೆ ಎಂದರು.
ಖಾಸಗಿಯವರಿಂದ ಒತ್ತುವರಿಯಾಗಿರುವ 122 ಕೆರೆಗಳ ಪೈಕಿ 88 ಕೆರೆಗಳಲ್ಲಿ ಕಟ್ಟಡ, 44 ಕೆರೆಗಳು ಧಾರ್ಮಿಕ ಕಟ್ಟಡ, 58 ಕೆರೆಗಳಲ್ಲಿ ಖಾಲಿ ಜಾಗ, ರಸ್ತೆಗಾಗಿ 7 ಕೆರೆ, ಅಘೋಷಿತ ಸ್ಲಂಗಳಿಗಾಗಿ 9 ಕೆರೆಗಳ ಒತ್ತುವರಿಯಾಗಿದೆ. 183 ಕೆರೆಗಳ ಪೈಕಿ ಒತ್ತುವರಿಯಾಗಿರುವ 122 ಕೆರೆಗಳ ಸರ್ವೆ ನಡೆಸಿ ನಕಾಶೆಗಳನ್ನು ಕಂದಾಯ ಇಲಾಖೆಗೆ ನೀಡಲಾಗಿದೆ.
ಒತ್ತುವರಿದಾರರಿಗೆ ನೋಟಿಸ್ ಕೊಟ್ಟು, ತೆರವು ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲಾ ಬಗೆಯ ಒತ್ತುವರಿಗಳನ್ನು ತೆರವುಗೊಳಿಸಲು ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ಕಾಲಾವಕಾಶಬೇಕು. ಆದರೆ, ಉಳಿದಿರುವ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆಯೂ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಖಾಸಗಿಯವರಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಕೆರೆಗಳ ಮಾಲಿಕತ್ವವನ್ನು ಖಾಸಗಿಯವರಿಗೆ ಬಿಟ್ಟುಕೊಡುವುದಿಲ್ಲ ಎಂದು ಭರವಸೆ ನೀಡಿದರು.
ಅರ್ಜಿದಾರರ ಮನವಿಯಂತೆ ಕೆರೆಗಳ ಒತ್ತುವರಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯ ಜೊತೆಗೆ ಒತ್ತುವರಿ ತೆರವಿಗೆ ಕೈಗೊಂಡ ಕ್ರಮಗಳನ್ನು ನ್ಯಾಯಾಲಯ ಮತ್ತು ಅರ್ಜಿದಾರರಿಗೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ 13ಕ್ಕೆ ಮುಂದೂಡಿತು.
ಇದನ್ನೂ ಓದಿ: ಹಲಸೂರು ಕೆರೆ ಮಾಲಿನ್ಯ: ₹2.94 ಕೋಟಿ ದಂಡ ವಿಧಿಸಿದ್ದ ಎನ್‌ಜಿಟಿ ಆದೇಶ ರದ್ದುಪಡಿಸಿದ ಹೈಕೋರ್ಟ್