ಬೆಂಗಳೂರು: ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ರೂಪ, ಹೊಸ ಸ್ವರೂಪ ನೀಡಲು ಸರ್ಕಾರ ಇದೀಗ ಮುಂದಾಗಿದೆ. 'ಒಂದು ರಾಜ್ಯ ಹಲವು ಜಗತ್ತು' ಘೋಷವಾಕ್ಯದೊಂದಿಗೆ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿರುವ ಕರುನಾಡು ಇದೀಗ ಹೊಸ ಹೊಸ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಚಿಂತನೆ ನಡೆಸಿದೆ. ಅದರ ಜೊತೆಗೆ ರಾಜ್ಯ ಸರ್ಕಾರ ಐದು ಹೊಸ ತಾಣಗಳನ್ನು ವಿಶ್ವಪಾರಂಪರಿಕ ತಾಣ ಪಟ್ಟಿಯಲ್ಲಿ ಸೇರಿಸುವಂತೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ.
ಕರ್ನಾಟಕ ರಾಜ್ಯ ಶ್ರೀಮಂತ ಸಂಸ್ಕೃತಿ, ಐತಿಹಾಸಿಕ ತಾಣ, ಪಾರಂಪರಿಕ ಸ್ಮಾರಕ, ಕಟ್ಟಡಗಳು, ವೈವಿಧ್ಯಮಯ ಭೂ ಪ್ರದೇಶಗಳನ್ನು ಹೊಂದಿರುವ ಗಂಧದ ನಾಡೆಂದೇ ಪ್ರಖ್ಯಾತಿ. ರಾಜ್ಯವು ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲೂ ಒಂದಾಗಿದೆ. ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲು ರಾಜ್ಯ ಸರ್ಕಾರ ಹಲವು ಕಾರ್ಯಕ್ರಮ, ನೀತಿಗಳನ್ನು ರೂಪಿಸುತ್ತಿದೆ. ಸಮುದ್ರ ತೀರ, ಹಚ್ಚಹಸಿರ ಗುಡ್ಡಗಾಡು, ಅರಣ್ಯ, ಬಯಲು ಪ್ರದೇಶಗಳನ್ನು ಹೊಂದಿರುವ ಕರ್ನಾಟಕ ಪ್ರವಾಸಿಗರಿಗೆ ನೆಚ್ಚಿನ ತಾಣವೂ ಹೌದು. ಕರ್ನಾಟಕ ದೇಶದಲ್ಲಿ ನಾಲ್ಕನೇ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿರುವ ರಾಜ್ಯವಾಗಿದೆ.
ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ 4 ಸರ್ಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ), ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ (ಜೆಎಲ್‌ಆರ್) ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಲಿಮಿಟೆಡ್ (ಕೆಟಿಐಎಲ್) ಮತ್ತು ಕರ್ನಾಟಕ ಪ್ರದರ್ಶನ ಪ್ರಾಧಿಕಾರ (ಕೆಇಎ). ಇದೀಗ ಹೊಸ ಸ್ವರೂಪದಲ್ಲಿ ಪ್ರಾವಸೋದ್ಯಮವನ್ನು ಉತ್ತೇಜಿಸಿ ರಾಜ್ಯವನ್ನು ಅಗ್ರಗಣ್ಯ ಪ್ರವಾಸಿ ತಾಣವನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿನ ಅಧಿಕೃತ ಪ್ರವಾಸಿ ತಾಣಗಳು, ಸ್ಮಾರಕಗಳು ಎಷ್ಟು?: ರಾಜ್ಯದಲ್ಲಿ 2020-2025ರ ಪ್ರವಾಸೋದ್ಯಮ ನೀತಿಯಡಿ ಸುಮಾರು 778 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. 2015-20ರ ಪ್ರವಾಸೋದ್ಯಮ ನೀತಿಯಡಿ 319 ಪ್ರವಾಸಿ ತಾಣಗಳನ್ನು ಗುರುತಿಸಲಾಗಿತ್ತು. 2020-25ರ ಪ್ರವಾಸೋದ್ಯಮ ನೀಡಿಯಡಿ ಒಟ್ಟು 778 ಪ್ರವಾಸಿ ತಾಣವನ್ನು ಗುರುತಿಸಲಾಗಿದೆ. ಬೆಂಗಳೂರು ವಿಭಾಗದಲ್ಲಿ 211 ಪ್ರವಾಸಿ ತಾಣ, ಮೈಸೂರು ವಿಭಾಗದಲ್ಲಿ 251, ಬೆಳಗಾವಿ ವಿಭಾಗದಲ್ಲಿ 222, ಕಲಬುರ್ಗಿ ವಿಭಾಗದಲ್ಲಿ 94 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿನ ಒಟ್ಟು 844 ಸ್ಮಾರಕಗಳು ಸುರಕ್ಷಿತ ಪಟ್ಟಿಯಲ್ಲಿದೆ. ರಾಜ್ಯದ ಸ್ಮಾರಕಗಳ ಸಂರಕ್ಷಣೆ ಮತ್ತು ಮೂಲಭೂತ ಮತ್ತು ಉನ್ನತ ಸೌಕರ್ಯಗಳನ್ನು ಒದಗಿಸಿ ಸ್ಮಾರಕಗಳನ್ನು ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು 'ಸ್ಮಾರಕ ದತ್ತು' ಯೋಜನೆಯನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಒಟ್ಟಾರೆ 272 ಸ್ಮಾರಕಗಳನ್ನು ಆಯ್ಕೆಗೊಳಿಸಲಾಗಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2021-22ರಲ್ಲಿ ರಾಜ್ಯ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ 305 ಕೋಟಿ ರೂ. ಬಿಡುಗಡೆ ಮಾಡಿತ್ತು. 2022-23ರಲ್ಲಿ 412 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದ್ದರೆ, 2023-24ರಲ್ಲಿ 305 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ಇನ್ನು 2024-25ರಲ್ಲಿ ಅಕ್ಟೋಬರ್ ವರೆಗೆ 113 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.
ವಾರ್ಷಿಕ 48 ಕೋಟಿ ಪ್ರವಾಸಿಗರನ್ನು ಸೆಳೆಯುವ ಗುರಿ: ಕರ್ನಾಟಕ ಸರ್ಕಾರ ಇದೀಗ 2024-2029 ಪ್ರವಾಸೋದ್ಯಮ ನೀತಿ ಜಾರಿಗೊಳಿಸಿದೆ. ಅದರಂತೆ ರಾಜ್ಯವನ್ನು ಅಗ್ರಗಣ್ಯ ಪ್ರವಾಸಿ ತಾಣವಾಗಿ ರೂಪಿಸಲು ಮುಂದಾಗಿದೆ. ಐದು ವರ್ಷದಲ್ಲಿ ಸುಮಾರು 7,800 ಕೋಟಿ ರೂ. ಬಂಡವಾಳ ಹೂಡಿಕೆಯ ನಿರೀಕ್ಷೆಯನ್ನು ಹೊಂದಲಾಗಿದೆ. ರಾಜ್ಯದಲ್ಲಿ ಸದ್ಯ ವಾರ್ಷಿಕ ಸುಮಾರು 4-6 ಲಕ್ಷ ವಿದೇಶಿ ಪ್ರವಾಸಿಗರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇನ್ನು ರಾಜ್ಯಕ್ಕೆ ಭೇಟಿ ನೀಡುತ್ತಿರುವ ವಾರ್ಷಿಕ ದೇಶಿ ಪ್ರವಾಸಿಗರ ಸಂಖ್ಯೆ ವಾರ್ಷಿಕ ಸುಮಾರು 25-30 ಕೋಟಿ ಇದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಇದೀಗ ಹೊಸ ಪ್ರವಾಸೋದ್ಯಮ ನೀತಿ ಮೂಲಕ ವಾರ್ಷಿಕ ಸುಮಾರು 20 ಲಕ್ಷ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಗುರಿ ಹೊಂದಿದೆ. ಅದೇ ರೀತಿ 48 ಕೋಟಿ ದೇಶಿ ಪ್ರವಾಸಿಗರನ್ನು ಸೆಳೆಯುವ ನಿರೀಕ್ಷಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ನೀತಿಯಲ್ಲಿ 25 ನಿರ್ದಿಷ್ಟ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ವಾಯು, ಭೂಮಿ, ಜಲ ಭಾಗದಲ್ಲಿ 50 ಸಾಹಸ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲಾಗುವುದು. ರಾಜ್ಯಾದ್ಯಂತ ಕ್ಯಾರವಾನ್ ಪ್ರವಾಸೋದ್ಯಮ ಉತ್ತೇಜಿಸಲು ಮೊದಲ 200 ಕ್ಯಾರವಾನ್ಗಳಿಗೆ ಮೋಟಾರು ವಾಹನ ತೆರಿಗೆ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.
ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಿಸಲು ಪ್ರಸ್ತಾವನೆ: ಸದ್ಯ ರಾಜ್ಯದ ನಾಲ್ಕು ಪ್ರವಾಸಿ ತಾಣಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿವೆ. ರಾಜ್ಯದ ಹಂಪಿ, ಪಟ್ಟದಕಲ್ಲಿನ ಚಾಲುಕ್ಯರ ಸ್ಮಾರಕ, ಬೇಲೂರು-ಹಳೇಬೀಡಿನ ಹೊಯ್ಸಳರ ದೇವಾಲಯ ಹಾಗೂ ಪಶ್ಚಿಮಘಟ್ಟ ಯುನೆಸ್ಕೋ ಘೋಷಿಸಿದ ವಿಶ್ವಪಾರಂಪರಿಕ ತಾಣ ಪಟ್ಟಿಯಲ್ಲಿದೆ. ಅದೇ ರೀತಿ ಯುನೆಸ್ಕೋ ಹಂಗಾಮಿ ಪಟ್ಟಿಯಲ್ಲಿ ಐಹೊಳೆ-ಬಾದಾಮಿ-ಪಟ್ಟದಕಲ್ಲು ದೇವಸ್ಥಾನಗಳು, ಡೆಕ್ಕನ್ ಸುಲ್ತಾನೇಟ್ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನ ಸೇರ್ಪಡೆಯಾಗಿದೆ.
ಇದೀಗ ರಾಜ್ಯ ಸರ್ಕಾರ ಐದು ತಾಣಗಳನ್ನು ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಖಾಯಂ ಆಗಿ ಸೇರಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ. ಈ ಪೈಕಿ ಹೊಸದಾಗಿ ಬೀದರ್ನ ಐತಿಹಾಸಿಕ ಗುಹಾಂತರ ಜಲಮಾರ್ಗ ಕರೇಜ್ಗೆ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ನೀಡುವಂತೆ ಕೋರಲಿದೆ. ಹದಿನೈದನೇ ಶತಮಾನದಲ್ಲಿ ಬಹಮನಿ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಸುಮಾರು 60ರಿಂದ 70 ಅಡಿ ನೆಲದಾಳದಲ್ಲಿ ಅಂಕುಡೊಂಕಾದ ನೀರಿನ ಸುರಂಗ ಇದಾಗಿದೆ.
ಬೀದರ್, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿರುವ ಡೆಕ್ಕನ್ ಸುಲ್ತಾನರ ಸ್ಮಾರಕಗಳು ಮತ್ತು ಕೋಟೆಗಳು ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ವಿಶ್ವ ಪರಂಪರೆಯ ಟ್ಯಾಗ್ ನೀಡುವಂತೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಇನ್ನು ಯಾದಗಿರಿ ದಕ್ಷಿಣದ ವಾರಣಾಸಿ ಎಂದು ಕರೆಯಲ್ಪಡುವ ಪವಿತ್ರ ಕ್ಷೇತ್ರ ಶಿರವಾಳ ಗ್ರಾಮವನ್ನು ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರಿಸಲು ಮನವಿ ಮಾಡಲಿದೆ. ಇದರ ಜೊತೆಗೆ ಹಾಸನದ ಶ್ರವಣಬೆಳಗೊಳ ಮತ್ತು ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮವನ್ನು ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಲು ಕೋರಿ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಈ ತಿಂಗಳಲ್ಲಿ ಐದು ಪ್ರವಾಸಿ ತಾಣಗಳ ಪಟ್ಟಿಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಈ ಪ್ರಸ್ತಾವನೆಯ ಪಟ್ಟಿಗಳನ್ನು ಕೇಂದ್ರ ಸರ್ಕಾರ ಯುನೆಸ್ಕೋಗೆ ಸಲ್ಲಿಸಲಿದೆ ಎಂದು ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಶ್ವ ಪಾರಂಪರಿಕ ತಾಣದಲ್ಲಿ ಜಾಗತಿಕ ಶ್ರೀಮಂತ ಪರಂಪರೆಯ ಕಾರುಗಳ ಪಯಣ