ಗುವಾಹಟಿ, ಅಸ್ಸಾಂ: ಕಳೆದ ಐದಾರು ದಶಕಗಳಿಂದ ಅಸ್ಸಾಂನ ಜಟಿಂಗದಲ್ಲಿ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಮಾನವು ನಿಗೂಢ ಹಾಗೂ ಊಹಾಪೋಹಕ್ಕೆ ಕಾರಣವಾಗಿದೆ. ಈಶಾನ್ಯ ಭಾರತದ ಅಸ್ಸಾಂನ ಸುಂದರ ದಿಮಾ ಹಸಾವೊ ಜಿಲ್ಲೆಯಲ್ಲಿರುವ ಜಟಿಂಗಾ ಗ್ರಾಮವು ಈ ವಿಚಿತ್ರ ಘಟನೆಯಿಂದಾಗಿ ಜಾಗತಿಕ ಗಮನ ಸೆಳೆದಿತ್ತು. ಜಟಿಂಗಾದಲ್ಲಿ 70 ರಿಂದ 90ರ ದಶಕದಲ್ಲಿ ಸಂಭವಿಸಿದ ವಲಸೆ ಹಕ್ಕಿಗಳ ಹಿಂಡುಗಳು ಸಾವು ಸಾಕಷ್ಟು ಕುತೂಹಲ ಮೂಡಿಸಿತ್ತು. ಅಲ್ಲದೇ, ಇದು ನಿಗೂಢವಾಗಿಯೇ ಉಳಿದಿತ್ತು. ಇನ್ನೊಂದೆಡೆ, ಪಕ್ಷಿಗಳ ಸಾವಿನ ಬಗ್ಗೆ ಹಲವಾರು ನಿಗೂಢ ಕಥೆಗಳೂ ಇವೆ.
ಕೆಲವರು ಇದನ್ನು ಅಲೌಕಿಕ ವಿದ್ಯಮಾನ ಎಂದೇ ನಂಬಿದ್ದರೆ, ಹಲವರು ವಿದ್ಯುತ್ಕಾಂತೀಯ ಶಕ್ತಿಗಳೇ ಪಕ್ಷಿಗಳ ಸಾವಿಗೆ ಕಾರಣ ಎಂದು ಹೇಳಿದ್ದರು. ಈ ಕುತೂಹಲಕಾರಿ ಘಟನೆಯು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ನಂತಹ ಪ್ರಸಿದ್ಧ ಸಂಸ್ಥೆಗಳನ್ನು ಒಳಗೊಂಡಂತೆ ವಿಶ್ವಾದ್ಯಂತ ಪಕ್ಷಿವಿಜ್ಞಾನಿಗಳ ಗಮನ ಸೆಳೆಯಿತು. ಈ ರಹಸ್ಯ ಬೇಧಿಸುವುದು ಒಂದು ಮಹತ್ವದ ಸವಾಲಾಗಿತ್ತು ಕೂಡಾ. ಅಲೌಕಿಕ ಶಕ್ತಿಗಳ ಕುರಿತಂತೆ ಸ್ಥಳೀಯ ಬುಡಕಟ್ಟು ಸಮುದಾಯಗಳಲ್ಲಿ ಆಳವಾಗಿ ಬೇರೂರಿರುವ ನಂಬಿಕೆಯೂ ಕೂಡ ಈ ಘಟನೆಯ ಸುತ್ತ ಆವರಿಸಿಕೊಂಡಿದೆ.
ಜಟಿಂಗ ಪಕ್ಷಿಗಳ ಆತ್ಮಹತ್ಯೆಯ ವಿಶ್ವಪ್ರಸಿದ್ಧ ಕೇಂದ್ರವಾಗಿದ್ದು ಹೇಗೆ?: ಜಟಿಂಗವು ಸುತ್ತಲೂ ಬೆಟ್ಟಗಳಿಂದ ಕೂಡಿರುವ ಕಣಿವೆ ಪ್ರದೇಶವಾಗಿದೆ. 70 ಮತ್ತು 80ರ ದಶಕದಲ್ಲಿ, ಜಟಿಂಗದಲ್ಲಿ ಒಂದು ವಿಚಿತ್ರ ವಿದ್ಯಮಾನ ಘಟಿಸಿತು. ಪ್ರತಿ ವರ್ಷ ಆಗಸ್ಟ್ ಅಂತ್ಯದಿಂದ ನವೆಂಬರ್‌ವರೆಗೆ ಬರುವ ವಲಸೆ ಹಕ್ಕಿಗಳ ಹಿಂಡು, ರಾತ್ರಿಯಲ್ಲಿ ಕೃತಕ ದೀಪಗಳಿಗೆ ಆಕರ್ಷಿತವಾಗಿ, ಬಳಿಕ ನೆಲಕ್ಕೆ ಅಪ್ಪಳಿಸಿ ಸಾಯುತ್ತಿದ್ದವು. ಇದು ಸ್ಥಳೀಯ ಜನರಿಗೆ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿತ್ತು.
ಈಗ ಜಟಿಂಗದಲ್ಲಿ ವಲಸೆ ಹಕ್ಕಿಗಳ ಸಂರಕ್ಷಣೆ ಮತ್ತು ರಕ್ಷಣೆಯಲ್ಲಿ ತೊಡಗಿರುವ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಜೋಸ್ರಿಂಗ್‌ಡಾವೊ ಫೋಂಗ್ಲೋ ಅವರು ಹಳೆಯ ಸ್ಥಳೀಯ ಕಥೆಯೊಂದನ್ನು 'ಈಟಿವಿ ಭಾರತ'ದೊಂದಿಗೆ ಹಂಚಿಕೊಂಡಿದ್ದಾರೆ. ''ದಶಕಗಳ ಹಿಂದೆ, ಜಟಿಂಗದಲ್ಲಿ ಗ್ರಾಮಸ್ಥರು ಉರುವಲಿನ ಮೇಲೆ ಆಹಾರ ಬೇಯಿಸುತ್ತಿದ್ದರು. ಇದ್ದಕ್ಕಿದ್ದಂತೆ, ಒಂದು ಪಕ್ಷಿ ಬೆಂಕಿಗೆ ಬಿದ್ದು ಸತ್ತಿತು. ತದನಂತರ, ಅನೇಕ ಪಕ್ಷಿಗಳು ಅದನ್ನು ಅನುಸರಿಸಿ, ಬೆಂಕಿಗೆ ಹಾರಿ ನಾಶವಾದವು. ಆಗ, ಅಲೌಕಿಕ ಶಕ್ತಿಗೆ ಹೆದರಿದ ಗ್ರಾಮಸ್ಥರು ಗ್ರಾಮವನ್ನೇ ತೊರೆದರು. ಈ ಘಟನೆಯು ಜಟಿಂಗನಲ್ಲಿನ ಪಕ್ಷಿಗಳ ಆತ್ಮಹತ್ಯೆಯ ವಿದ್ಯಮಾನವನ್ನು ಬೆಳಕಿಗೆ ತಂದಿತು. ಅಲ್ಲದೆ, ಅದೊಂದು ತೀವ್ರ ನಿಗೂಢ ವಿಷಯವಾಗಿ ಮಾರ್ಪಟ್ಟಿತು'' ಎನ್ನುತ್ತಾರೆ ಜೋಸ್ರಿಂಗ್‌ಡಾವೊ ಫೋಂಗ್ಲೋ.
ಜಟಿಂಗ ವಿದ್ಯಮಾನ ಎಂದರೇನು?: ಭೌಗೋಳಿಕ ಮತ್ತು ವಿಶಿಷ್ಟ ಗುಣಲಕ್ಷಣಗಳಿಂದ ಜಟಿಂಗವು ವಿಶೇಷ ಆಕರ್ಷಕ ಸ್ಥಳವಾಗಿದೆ. 90ರ ದಶಕದವರೆಗೆ, BNHS ವಿಜ್ಞಾನಿಗಳು ಮತ್ತು ಇತರ ಸಂಶೋಧಕರ ತಂಡವು ಈ ವಿದ್ಯಮಾನದ ಅಧ್ಯಯನಕ್ಕೆ ಆಗಮಿಸಿದಾಗ, ಜಟಿಂಗದಲ್ಲಿನ ಪಕ್ಷಿಗಳ ಆತ್ಮಹತ್ಯೆಯು ಬರ್ಮುಡಾ ಟ್ರಯಾಂಗಲ್ನ್ನು ಹೋಲುವ ನಿಗೂಢ ಘಟನೆಯಂತೆ ಕಂಡು ಬಂದಿತ್ತು. ಜೊತೆಗೆ, ಸಾರ್ವಜನಿಕರು ಮತ್ತು ಮಾಧ್ಯಮಗಳನ್ನು ಹೆಚ್ಚಾಗಿ ಆಕರ್ಷಿಸಿತ್ತು. ಹಲವು ವರ್ಷಗಳಿಂದ, ಪಕ್ಷಿಶಾಸ್ತ್ರಜ್ಞರು ಮತ್ತು ತಜ್ಞರು ಈ ವಲಸೆ ಹಕ್ಕಿಗಳ ಸಾವಿಗೆ ಕಾರಣ, ವಿವರಣೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ, 'ಪಕ್ಷಿ ಆತ್ಮಹತ್ಯೆಗಳು' ಎಂದೇ ಕರೆಯಲ್ಪಟ್ಟಿತು.
ವಾಸ್ತವದಲ್ಲಿ, ವಲಸೆ ಹಕ್ಕಿಗಳು ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಜಟಿಂಗಕ್ಕೆ ಆಗಮಿಸುತ್ತವೆ. ಆದರೂ ಈ ಪ್ರದೇಶದಲ್ಲಿನ ಮಂಜಿನ ರಾತ್ರಿಗಳು, ಜನವಸತಿ ಪ್ರದೇಶಗಳಲ್ಲಿನ ಕೃತಕ ಬೆಳಕಿನ ಮೂಲಗಳು ಈ ಪಕ್ಷಿಗಳನ್ನು ಆಕರ್ಷಿಸಿವೆ. ಅವು ದಕ್ಷಿಣದಿಂದ ಉತ್ತರ ದಿಕ್ಕಿನತ್ತ ಹಾರುವಾಗ, ದೀಪಗಳ ಸೆಳೆತಕ್ಕೆ ಒಳಗಾಗುವುದಲ್ಲದೇ, ದಟ್ಟ ಕಾಡುಗಳಲ್ಲಿನ ಮರಗಳು ಮತ್ತು ಬಿದಿರುಗಳಿಗೆ ಡಿಕ್ಕಿ ಹೊಡೆಯುತ್ತವೆ. ಆಗ ಈ ಹಕ್ಕಿಗಳು, ದಿಗ್ಭ್ರಮೆಗೊಳ್ಳುವುದಲ್ಲದೇ, ಗಾಯಗೊಂಡು ಹಾರಲಾಗದೆ ಪ್ರಾಣ ಬಿಟ್ಟಿವೆ. ಬೆಳಕಿನ ಮೂಲಗಳ ಮೇಲಿನ ಆಕರ್ಷಣೆಯೇ ಈ ವಿದ್ಯಮಾನಕ್ಕೆ ಮೂಲ ಕಾರಣವಾಗಿದೆ.
ವಲಸೆ ಹಕ್ಕಿಗಳು ಜಟಿಂಗದತ್ತ ಸೆಳೆಯಲ್ಪಡುವುದು ಏಕೆ?: ಜಟಿಂಗ ಬೆಟ್ಟಗಳಿಂದ ಸುತ್ತುವರಿದ ಕಿರಿದಾದ ಕಣಿವೆ ಪ್ರದೇಶ. ಒಂದು ಕಡೆ ಅಸ್ಸಾಂನ ಬರಾಕ್ ಕಣಿವೆ ಮತ್ತು ಇನ್ನೊಂದು ಕಡೆ ನಾಗಾವ್ ಬಯಲು ಪ್ರದೇಶವಿದೆ. ಇತರ ಎರಡು ಬದಿಗಳು ಚಿರಾಪುಂಜಿ ಮತ್ತು ಮಣಿಪುರದಂತೆಯೇ ಮೇಘಾಲಯದ ಮಳೆ ಸಮೃದ್ಧ ಪ್ರದೇಶಗಳ ಗಡಿಗಳಾಗಿವೆ. ವಲಸೆ ಹಕ್ಕಿಗಳು ವರ್ಷದ ನಿರ್ದಿಷ್ಟ ಸಮಯದಲ್ಲಿ ಇಲ್ಲಿಗೆ ಬಂದು ಸೇರುತ್ತವೆ. ಆದರೆ, ದೂರದ ಹಾರಾಟದ ಸಾಮರ್ಥ್ಯ ಹೊಂದಿರುವ ಈ ಪಕ್ಷಿಗಳು ಜಟಿಂಗದಲ್ಲಿ ಏಕೆ ದುರ್ಬಲಗೊಳ್ಳುತ್ತವೆ ಮತ್ತು ಬೆಳಕಿಗೆ ಬಲಿಯಾಗುತ್ತವೆ? ಎಂಬುದು ಪ್ರಶ್ನೆಯಾಗಿದೆ.
ಈ ಬಗ್ಗೆ ಹೆಸರಾಂತ ನಿಸರ್ಗಶಾಸ್ತ್ರಜ್ಞ ಮತ್ತು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಅಡಿಯಲ್ಲಿ ಇಂಡಿಯಾ ಬರ್ಡ್ಸ್ ಕನ್ಸರ್ವೇಶನ್ ನೆಟ್ವರ್ಕ್ನ (IBCN) ಸದಸ್ಯ ಮತ್ತು ಮೆಗಾಮಿಕ್ಸ್ ನೇಚರ್ ಕ್ಲಬ್‌ನ ಸಂಚಾಲಕರಾದ ದೇಬಜಿತ್ ಫುಕನ್ ಅವರು ಹಲವಾರು ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಫುಕನ್ ಹೇಳುವಂತೆ, "ಜಟಿಂಗವು ಕಿರಿದಾದ, ತಗ್ಗು ಕಣಿವೆಯಾಗಿದೆ. ವಲಸೆ ಹಕ್ಕಿಗಳ ಸಂಖ್ಯೆ ಹೆಚ್ಚಾದಂತೆ ಆಹಾರದ ಕೊರತೆಯೂ ಉಲ್ಬಣಗೊಳ್ಳುತ್ತದೆ. ಹಸಿವಿನಿಂದ ದುರ್ಬಲಗೊಂಡ ಈ ಪಕ್ಷಿಗಳು ಈ ಪ್ರದೇಶದಲ್ಲಿ ದೀರ್ಘ ಹಾರಾಟ ಮಾಡಲು ಹಾಗೂ ದೂರವನ್ನು ಕ್ರಮಿಸಲು ಸಾಧ್ಯವಾಗುವುದಿಲ್ಲ''.
''ಎರಡನೆಯದಾಗಿ, ವಲಸೆಯ ಋತುವಿನಲ್ಲಿ ಜಟಿಂಗದಲ್ಲಿನ ತೇವಾಂಶದ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಸಾಕಷ್ಟು ಆಮ್ಲಜನಕವಿಲ್ಲದೇ ಪಕ್ಷಿಗಳು ದುರ್ಬಲಗೊಂಡಿರುತ್ತವೆಯಲ್ಲದೆ, ಗಾಳಿಯ ಹುಡುಕಾಟದಲ್ಲಿ ಮೇಲಕ್ಕೆ ಏರುತ್ತವೆ. ಆದರೆ, ಸಮತಟ್ಟಾದ ಭೂಪ್ರದೇಶಗಳಲ್ಲಿ ಗಾಳಿ ಸಿಗದೆ ಮತ್ತಷ್ಟು ಶಕ್ತಿಹೀನಗೊಳ್ಳುತ್ತವೆ. ಪರಿಣಾಮ, ಯಾವುದೇ ಬೆಳಕು ಈ ನಿಶ್ಯಕ್ತಗೊಂಡ ಪಕ್ಷಿಗಳನ್ನು ಆಕರ್ಷಿಸುತ್ತದೆ. ಇದರಿಂದಾಗಿ ಅವು ದಿಗ್ಭ್ರಮೆಗೊಳ್ಳುವುದಲ್ಲದೆ, ಮತ್ತಷ್ಟು ದುರ್ಬಲವಾಗುತ್ತವೆ. ಹಿಂದೆ, ಸ್ಥಳೀಯರು ಆಹಾರ ಮತ್ತು ಬೇಟೆಯ ಆನಂದಕ್ಕಾಗಿ ಈ ಪಕ್ಷಿಗಳನ್ನು ಬಲೆಗೆ ಬೀಳಿಸಿ ಕೊಲ್ಲುತ್ತಿದ್ದರು. ಇದು ನಿಜವಾಗಿಯೂ ಪಕ್ಷಿ ಆತ್ಮಹತ್ಯೆ ಅಲ್ಲ, ಬದಲಿಗೆ ಭೌಗೋಳಿಕ ಮತ್ತು ಹವಾಮಾನ ಅಂಶಗಳ ಪರಿಣಾಮವಾಗಿದೆ'' ಎಂದು ಪುಕನ್ ಹೇಳಿದ್ದಾರೆ.
ಹಕ್ಕಿ ಆತ್ಮಹತ್ಯೆಯ ಹಿಂದಿನ ರಹಸ್ಯವೇನು?: "ಬೆಳಕಿನ ಮೂಲಗಳಿಂದ ಆಕರ್ಷಿತವಾದ ದುರ್ಬಲ ಪಕ್ಷಿಗಳು ಮನುಷ್ಯರಿಂದಲೇ ಕೊಲ್ಲಲ್ಪಟ್ಟವು. ಸ್ಥಳೀಯರು ಈ ಪಕ್ಷಿಗಳನ್ನು ಆಹಾರಕ್ಕಾಗಿ ಬೇಟೆಯಾಡುವ ಸಾಂಪ್ರದಾಯಿಕ ಅಭ್ಯಾಸವನ್ನೂ ಕೂಡ ಹೊಂದಿದ್ದರು. ವೈಜ್ಞಾನಿಕ ತಿಳುವಳಿಕೆಯ ಕೊರತೆಯು ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ ಎಂಬ ವ್ಯಾಪಕ ನಂಬಿಕೆಗೆ ಕಾರಣವಾಯಿತು" ಎಂದು ದೇಬಜಿತ್ ಫುಕನ್ ವಿವರಿಸುತ್ತಾರೆ.
ಸ್ಥಳೀಯ ಸಂರಕ್ಷಣಾಕಾರ ಜೋಸ್ರಿಂಗ್ಡಾವೊ ಫೋಂಗ್ಲೋ ಪ್ರಕಾರ, "ಹಿಂದೆ, ಜಟಿಂಗದ ಗ್ರಾಮಸ್ಥರು ಆಹಾರಕ್ಕಾಗಿ ಪಕ್ಷಿಗಳನ್ನು ಬಲೆಗೆ ಬೀಳಿಸಿ ಕೊಲ್ಲುತ್ತಿದ್ದರು. ಅಲ್ಲದೆ, ಬೇಟೆಯಾಡುವ ಪಕ್ಷಿಗಳು ಮನರಂಜನಾ ಚಟುವಟಿಕೆಯಾಗಿಯೂ ಮಾರ್ಪಟ್ಟವು. ಜನರು ಪಕ್ಷಿಗಳನ್ನು ಆಕರ್ಷಿಸಲು ಸೀಮೆಎಣ್ಣೆ ದೀಪಗಳು ಮತ್ತು ಶಕ್ತಿಯುತ ಹ್ಯಾಲೊಜೆನ್ ದೀಪಗಳನ್ನು ಬಳಸಿ ಬಲೆಗೆ ಬೀಳಿಸುತ್ತಿದ್ದರು''.
2010ರಲ್ಲಿ, ಬ್ಲೂ ಹಿಲ್ಸ್ ಸೊಸೈಟಿ, ಎನ್‌ಜಿಒ, ಅರಣ್ಯ ಇಲಾಖೆ, ನಾರ್ತ್ ಕ್ಯಾಚಾರ್ ಹಿಲ್ಸ್ ಸ್ವಾಯತ್ತ ಮಂಡಳಿ ಮತ್ತು ಜಿಲ್ಲಾಡಳಿತದ ಸಹಯೋಗದ ಪ್ರಯತ್ನವು ಪಕ್ಷಿಗಳ ಬೇಟೆಯ ವಿರುದ್ಧ ಜಾಗೃತಿ ಅಭಿಯಾನಗಳನ್ನು ಹುಟ್ಟುಹಾಕಿತು. ಇದರ ಪರಿಣಾಮವಾಗಿ, ಜಟಿಂಗದಲ್ಲೀಗ ಪಕ್ಷಿಗಳ ಬೇಟೆ ಇದೀಗ ಗಣನೀಯವಾಗಿ ಕಡಿಮೆಯಾಗಿದೆ.
ಮತ್ತಷ್ಟು ವಿವರಣೆ ನೀಡಿದ ಫೋಂಗ್ಲೋ, "ಜಿಲ್ಲಾಡಳಿತವು ಪಕ್ಷಿ ಬೇಟೆಯ ಮೇಲೆ ನಿಷೇಧ ವಿಧಿಸಿದೆ, ಇದು ಪಕ್ಷಿಗಳ ಸಾವಿನ ಇಳಿಕೆಗೆ ಕಾರಣವಾಗಿದೆ. ಹೆಚ್ಚುವರಿಯಾಗಿ, ಉತ್ತರ ಕ್ಯಾಚಾರ್ ಹಿಲ್ಸ್ ಸ್ವಾಯತ್ತ ಮಂಡಳಿಯು ವಲಸೆ ಹಕ್ಕಿ ಸಂರಕ್ಷಣೆ ಮತ್ತು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜಟಿಂಗ ಉತ್ಸವವನ್ನು ಆಯೋಜಿಸುತ್ತದೆ. ಈ ಉತ್ಸವವು ಕ್ರಮೇಣ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿ ಮಾರ್ಪಟ್ಟಿದೆ''.
ಜಟಿಂಗ ಇನ್ನೂ ನಿಗೂಢವೇ?: ಜಟಿಂಗವು ಈಗ ಪಕ್ಷಿ ಆತ್ಮಹತ್ಯೆಗಳ ಕೇಂದ್ರ ಎಂಬ ನಿಗೂಢತೆಯಿಂದ ಹೊರಬಂದಿದೆ. ವಲಸೆ ಹಕ್ಕಿಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಸ್ಥಳೀಯ ಪ್ರಯತ್ನಗಳು ನಡೆಯುತ್ತಿವೆ. ಎರಡು ದಶಕಗಳ ಹಿಂದೆಯೇ ಈ ನಿಗೂಢವನ್ನು ಪರಿಹರಿಸಲಾಗಿದ್ದರೂ, ಜಟಿಂಗದಲ್ಲಿ ಪಕ್ಷಿ ಸಂರಕ್ಷಣೆಗೆ ಸಾಕಷ್ಟು ಸವಾಲುಗಳಿವೆ. ತಂತ್ರಜ್ಞಾನ ಮತ್ತು ಮಾನವನ ಅತಿಕ್ರಮಣದಿಂದ ಜಟಿಂಗದಲ್ಲಿ ವಲಸೆ ಹಕ್ಕಿಗಳ ಆವಾಸಸ್ಥಾನವು ಈ ಮೊದಲಿನಂತಿಲ್ಲ.
ಜೋಸ್ರಿಂಗ್‌ಡಾವೊ ಫೋಂಗ್ಲೊ ಪ್ರಕಾರ, "ಜಟಿಂಗಕ್ಕೆ ಭೇಟಿ ನೀಡುವ ವಲಸೆ ಹಕ್ಕಿಗಳ ಸಂಖ್ಯೆ ಹಿಂದಿನದಕ್ಕೆ ಹೋಲಿಸಿದರೆ ಸಾಕಷ್ಟು ಕಡಿಮೆಯಾಗಿದೆ. ಪಕ್ಷಿಗಳ ವಲಸೆಯು ಜಟಿಂಗಕ್ಕೆ ಸಮೀಪವಿರುವ ದೋಹಿಂಗ್ ಗ್ರಾಮದತ್ತ ಬದಲಾಗುತ್ತಿದೆ. ಹವಾಮಾನ ಬದಲಾವಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳೂ ಕೂಡ ಈ ಬದಲಾವಣೆಗೆ ಪ್ರಾಥಮಿಕ ಕಾರಣಗಳಾಗಿವೆ".
ದೇಬಜಿತ್ ಫುಕನ್ ಹೇಳುವಂತೆ, "ಹವಾಮಾನ ಬದಲಾವಣೆಯಿಂದಾಗಿ ತೇವಾಂಶದ ಮಟ್ಟ ಕಡಿಮೆಯಾಗುವುದು ಮತ್ತು ಕಡಿಮೆ ಮಳೆಯು ವಲಸೆ ಹಕ್ಕಿಗಳ ಜನಸಂಖ್ಯೆಯಲ್ಲಿ ಇಳಿಮುಖಕ್ಕೆ ಕಾರಣವಾಗಿದೆ. ಮಾನವ ಚಟುವಟಿಕೆಗಳು ಜಟಿಂಗದ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿವೆ."
ಇದನ್ನೂ ಓದಿ: ಕೊಲ್ಲಾಪುರದಲ್ಲಿ ದೇಶಿ, ವಿದೇಶಿ ತಳಿಗಳ ಕ್ಯಾಟ್ ಶೋ: ಗಮನ ಸೆಳೆದ ಹುಲಿಯಂತಿರುವ ಬೆಂಗಾಲ್ ಬೆಕ್ಕು, ಇವುಗಳ ಬೆಲೆ, ಅಬ್ಬಾ!