ಧಾರವಾಡ: ವ್ಯಕ್ತಿಯೊಬ್ಬನನ್ನು ಆತನ ಮನೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ. ಆರೋಪಿಗಳು ಪರಾರಿಯಾಗಿದ್ದು, ಹತ್ಯೆ ಹಿನ್ನೆಲೆ ಮಾತ್ರ ನಿಗೂಢವಾಗಿದೆ.
ಗರಗ ಗ್ರಾಮದ ಗಿರೀಶ ಕರಡಿಗುಡ್ಡ (50) ಮೃತ ದುರ್ದೈವಿಯಾಗಿದ್ದು, ರಿಯಲ್ ಎಸ್ಟೆಟ್ ವ್ಯವಹಾರ ನಡೆಸುತ್ತಿದ್ದರು. ತನ್ನ ಮನೆಯಲ್ಲಿ ಕುಳಿತುಕೊಂಡ್ದಿದ್ದಾಗ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಗೆ ನುಗ್ಗಿರುವ ಅಪರಿಚಿತರು ಮಾರಕಾಸ್ತ್ರಗಳಿಂದ ಕಂಡ ಕಂಡಲ್ಲಿ ಇರಿದು, ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ.
ಮಗಳು ಶಾಲೆಯಿಂದ ಬಂದು ಕದ ತೆಗೆದಾಗಲೇ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಗಿರೀಶ ಗರಗ ಪೊಲೀಸ್ ಠಾಣೆ ಸಮೀಪದಲ್ಲೇ ಬಾಡಿಗೆ ಮನೆಯಲ್ಲಿದ್ದ, ತನ್ನದೇ ಗ್ರಾಮದಲ್ಲಿ ಹೊಸ ಮನೆ ಸಹ ಕಟ್ಟಿಸುತ್ತಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಡಾ. ಗೋಪಾಲ ಬ್ಯಾಕೋಡ್ ಕೂಡ ಭೇಟಿ ನೀಡಿ ಪರಿಶೀಲಿಸಿದರು.
ಊರ ಹೊರಗೆ ಈ ಮನೆ ಇದ್ದು, ಮನೆ ಪಕ್ಕದಲ್ಲೇ ಮಾವಿನ ತೋಟವಿದೆ. ಹಂತಕರು, ಕೊಲೆ ಮಾಡಿದ ಬಳಿಕ ಮನೆಯ ಹಿಂಬದಿಯಿಂದ ಮಾವಿನ ತೋಟಕ್ಕೆ ಜಿಗಿದು ಪರಾರಿಯಾಗಿರುವ ಸಾಧ್ಯತೆ ಇದೆ. ಸದ್ಯ ಕೃತ್ಯ ಮಾಡಿದವರು ಯಾರು? ಕಾರಣ ಏನು? ಯಾವುದು ತಿಳಿದಿಲ್ಲ. ಹರಿತವಾದ ಮಾರಕಾಸ್ತ್ರಗಳಿಂದ ಹೊಡೆದಿರೋದು ಸ್ಪಷ್ಟವಾಗಿದ್ದು, ತನಿಖೆ ಕೈಗೊಂಡಿದ್ದೇವೆ ಅಂತಾ ಎಸ್ಪಿ ಡಾ. ಗೋಪಾಲ ಬ್ಯಾಕೋಡ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಆಸ್ತಿಗಾಗಿ ಸುಪಾರಿ ಕೊಟ್ಟು ಚಿಕ್ಕಪ್ಪನ ಕೊಲೆ; ಐವರ ಬಂಧನ