ದಾವಣಗೆರೆ :ಕಾಂಗ್ರೆಸ್ಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಗತಿಗೆಟ್ಟ ಪಾರ್ಟಿಯಾಗಿ ಮಾರ್ಪಟ್ಟಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಇಚ್ಛಿಸಿ ಇಡೀ ದೇಶದಲ್ಲಿ 400ಕ್ಕೂ ಹೆಚ್ಚು ಸೀಟು ಗೆಲ್ಲುವ ಸಲುವಾಗಿ, ದಾವಣಗೆರೆಗೆ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ಕೊಡಲಾಗಿದೆ ಎಂದರು.
ಟಿಕೆಟ್ ನೀಡಿದ ಬಳಿಕ ಏನೇ ಗೊಂದಲ ಇದ್ದರೂ ಮೋದಿ ಅವರನ್ನ ಪ್ರಧಾನಿಯನ್ನಾಗಿ ಮಾಡುವುದೇ ನಮ್ಮ ಗುರಿಯಾಗಿದೆ. ಟಿಕೆಟ್ ಘೋಷಣೆಯಾದ ಬಳಿಕ ಪ್ರತಿಯೊಂದು ಕಡೆ ಈ ರೀತಿಯ ಕೆಲ ಗೊಂದಲಗಳು ಇರುತ್ತವೆ. ಕಾಂಗ್ರೆಸ್ನಲ್ಲೂ ಟಿಕೆಟ್ ಘೋಷಣೆಯಾದ ಬಳಿಕ ಈ ರೀತಿಯ ಗೊಂದಲ ಎಲ್ಲ ಪಕ್ಷದಲ್ಲಿ ಸರ್ವೇ ಸಾಮಾನ್ಯ. ಕೆಲ ದಿನಗಳ ಬಳಿಕ ಎಲ್ಲವೂ ಸುಧಾರಣೆಯಾಗುತ್ತದೆ. ಇನ್ನು ನಮ್ಮ ಪಕ್ಷದಲ್ಲಿ ಯಾರೂ ಕೂಡ ರೆಬಲ್ ಆಗಿ ನಿಲ್ಲುವ ಪರಿಸ್ಥಿತಿ ಇಲ್ಲ ಎಂದು ಹೇಳಿದರು.
ಅತೃಪ್ತ ಬಣದ ನೇತೃತ್ವ ವಹಿಸಿರುವ ಎಂ.ಪಿ ರೇಣುಕಾಚಾರ್ಯ ಸೇರಿದಂತೆ ಎಸ್. ಎ ರವೀಂದ್ರನಾಥ್ ಕೂಡ ಹಿರಿಯರು. ಇಬ್ಬರೊಂದಿಗೆ ಮಾತನಾಡುತ್ತೇನೆ. ಇನ್ನು ಈ ಹಿಂದೆ ಎಂ ಪಿ ರೇಣುಕಾಚಾರ್ಯ ಸಿದ್ದೇಶ್ವರ್ ಅವರ ಶಿಷ್ಯ. ಕಳೆದ ಚುನಾವಣೆ ಗೊಂದಲದಿಂದ ಹೀಗೆ ಆಗಿದೆ ಎಂದು ಹೇಳಿದರು.
ಕೇಂದ್ರ ನಾಯಕರು ಈಶ್ವರಪ್ಪ ಅವರನ್ನು ಸಂಪರ್ಕ ಮಾಡಿದ್ದಾರೆ :ಈಶ್ವರಪ್ಪ 45 ವರ್ಷ ಪಕ್ಷದಲ್ಲಿ ದುಡಿದಿದ್ದಾರೆ. ಸಚಿವರು, ಶಾಸಕರು, ಡಿಸಿಎಂ ಆಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಹಾವೇರಿಯಿಂದ ಮಗನಿಗೆ ಟಿಕೆಟ್ ಸಿಕ್ಕಿಲ್ಲ ಎಂದು ಹೀಗೆ ಮಾತನಾಡಿರಬಹುದು. ಎಲ್ಲಾ ಸರಿಯಾಗುತ್ತೆ ಎಂದರು.
ಕೇಂದ್ರ ನಾಯಕರು ಈಗಾಗಲೇ ಈಶ್ವರಪ್ಪ ಅವರನ್ನು ಸಂಪರ್ಕ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲ ಸರಿಯಾಗುತ್ತೆ ಎಂದರು. ಬೆಂಗಳೂರಿನ ಅರಮನೆ ಮೈದಾನದ ವಿವಾದ ಪ್ರಕರಣಕ್ಕೆ ಮರು ಜೀವ ನೀಡಲು ಹೊರಟ ಸರ್ಕಾರದ ನಡೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೂ ಕೂಡ ದ್ವೇಷದ ರಾಜಕಾರಣ ಮಾಡಬಾರದು. ದ್ವೇಷದ ಬಾಣ ತಿರುಗಿ ನಿಮ್ಮ ಕಡೆ ಬರಬಹುದು. ಅಧಿಕಾರ ಇವತ್ತು ಇರುತ್ತೆ ನಾಳೆ ಹೋಗುತ್ತೆ. ಯಾರು ಇಲ್ಲಿ ಶಾಶ್ವತವಾಗಿ ಇರಲ್ಲ. ಸಿದ್ದರಾಮಯ್ಯ ಈ ಹಿಂದೆ ವಿರೋಧ ಪಕ್ಷದಲ್ಲಿ ಕೂಡ ಕೆಲಸ ಮಾಡಿದ್ದಾರೆ. ಮೈಸೂರು ರಾಜರ ಮೇಲೆ ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು ಎಂದು ಹೇಳಿದರು.