ಕರ್ನಾಟಕ

karnataka

ETV Bharat / state

ಕಳಪೆ ಔಷಧಿ ಪೂರೈಸಿ ಸರ್ಕಾರವೇ ಬಾಣಂತಿಯರನ್ನು ಕೊಂದಿದೆ: ಆರ್​.ಅಶೋಕ್​ - R ASHOK

ರಾಜ್ಯ ಸರ್ಕಾರ ಮೃತಪಟ್ಟ ಬಾಣಂತಿಯರ ಕುಟುಂಬಗಳಿಗೆ ಕೇವಲ 2 ಲಕ್ಷ ರೂ ಪರಿಹಾರ ನೀಡಿದೆ. ಸರ್ಕಾರಕ್ಕೆ ಬಡವರ ಜೀವದ ಬೆಲೆ ಗೊತ್ತಿಲ್ಲವೇ?. 25 ಲಕ್ಷ ಪರಿಹಾರ ಕೊಡಬೇಕು ಎಂದು ಪ್ರತಿಪಕ್ಷ ನಾಯಕ ಆರ್​.ಅಶೋಕ್​ ಒತ್ತಾಯಿಸಿದ್ದಾರೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್​.ಅಶೋಕ್
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್​.ಅಶೋಕ್ (ETV Bharat)

By ETV Bharat Karnataka Team

Published : Dec 1, 2024, 4:30 PM IST

ಬಳ್ಳಾರಿ:"ಕಳಪೆ ಗುಣಮಟ್ಟದ ಔಷಧಿ ಪೂರೈಕೆ ಮಾಡಿ ಸರ್ಕಾರವೇ ಬಾಣಂತಿಯರನ್ನು ಕೊಂದಿದೆ" ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್​.ಅಶೋಕ್​ ದೂರಿದರು. ಬಾಣಂತಿಯರ ಸರಣಿ ಸಾವು ಸಂಭವಿಸಿದ ಬಳ್ಳಾರಿಯ ವಿಮ್ಸ್‌ಗೆ ಭಾನುವಾರ ಭೇಟಿ ನೀಡಿದ ಅವರು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

"ಯಾರ ಒತ್ತಡದಿಂದ ಸರ್ಕಾರ, ಮಂತ್ರಿಗಳು ಈ ಕಳಪೆ ಔಷಧಿಗೆ ಅನುಮತಿ ಕೊಟ್ಟರು?. ನಾನು ವೈದ್ಯರ ಜೊತೆ ಮಾತನಾಡಿದ್ದೇನೆ. ಕಳಪೆ ಔಷಧಿ ಕೊಟ್ಟ ಮೇಲೆ ಅಂಗಾಂಗ ವೈಫಲ್ಯವಾಗಿ ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ 10 ತಿಂಗಳಲ್ಲಿ 111 ನವಜಾತ ಶಿಶುಗಳು ಮೃತಪಟ್ಟಿವೆ. ಬಳ್ಳಾರಿಯಲ್ಲಿ ನಾಲ್ವರು ಬಾಣಂತಿಯರು ಕೊನೆಯುಸಿರೆಳೆದಿದ್ದಾರೆ. ‌ಮೆಡಿಕಲ್ ಮಾಫಿಯಾದಿಂದ ಜನರಲ್ಲಿ ಆತಂಕ ಉಂಟಾಗಿದೆ. ಬಳ್ಳಾರಿಯಲ್ಲಿ ಐವಿ ದ್ರಾವಣ ನೀಡಿದ ಬಳಿಕ ಬಾಣಂತಿಯರಲ್ಲಿ ಬಹು ಅಂಗಾಂಗ ವೈಫಲ್ಯವಾಗಿದೆ. ಸರ್ಕಾರ ಖರೀದಿಸಿದ್ದ ಐವಿ ದ್ರಾವಣ ಔಷಧವಲ್ಲ, ಬದಲಿಗೆ ಕೊಲೆ ಮಾಡುವ ಕೆಮಿಕಲ್" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಪಕ್ಷ ನಾಯಕ ಆರ್​.ಅಶೋಕ್​ (ETV Bharat)

"ಐವಿ ದ್ರಾವಣ ಕಳಪೆ ಗುಣಮಪಟ್ಟದ್ದು, ಅದನ್ನು ಬಳಕೆ ಮಾಡಬಾರದು ಎಂದು ಆರು ತಿಂಗಳ ಹಿಂದೆ ಔಷಧ ನಿಯಂತ್ರಕರು ಹೇಳಿದ್ದರು. ಐವಿ ದ್ರಾವಣದ 97 ಬ್ಯಾಚ್‌ಗಳಲ್ಲಿ 23 ಬ್ಯಾಚ್ ಕಳಪೆ ಗುಣಮಟ್ಟದ್ದು ಎಂದು ಅವರು ವರದಿ ನೀಡಿದ್ದರು. ಕಳಪೆ ಗುಣಮಟ್ಟದ್ದೆಂದು ಗೊತ್ತಿದ್ದರೂ ಸರ್ಕಾರ ಯಾಕೆ ಖರೀದಿಸಿತು?. ಈ ಔಷಧ ಬಳಸಲು ಅನುಮತಿ ನೀಡಿದ ಬಲಾಢ್ಯರು ಯಾರು?. ಇದಕ್ಕೆ ಯಾರ ಚಿತಾವಣೆ ಇದೆ?. ರಾಜ್ಯ ಸರ್ಕಾರ ಕೇವಲ 2 ಲಕ್ಷ ರೂ ಪರಿಹಾರ ನೀಡಿದೆ. ಸರ್ಕಾರಕ್ಕೆ ಬಡವರ ಜೀವದ ಬೆಲೆ ಗೊತ್ತಿಲ್ಲವೇ. ಮೃತ ಬಾಣಂತಿಯರ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ ಪರಿಹಾರ ಕೊಡಬೇಕು" ಎಂದು ಆಗ್ರಹಿಸಿದರು.

"ಬಳ್ಳಾರಿಯಲ್ಲಿ ಬಾಣಂತಿಯರ ಸಾವಾಗಿದ್ದರೂ ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಕಾಣೆಯಾಗಿದ್ದಾರೆ. ಯಾರೊಬ್ಬರೂ ಜಿಲ್ಲಾಸ್ಪತ್ರೆಗೆ ಬಂದಿಲ್ಲ. ಸರ್ಕಾರದ ಮಂತ್ರಿಗಳು ರಾಜೀನಾಮೆ ಕೊಡಬೇಕು. ರಾಜ್ಯದಲ್ಲಿ ಈ ವರ್ಷ ಇಲ್ಲಿವರೆಗೆ ಸಂಭವಿಸಿರುವ 28 ಬಾಣಂತಿಯರ ಸಾವಿನ ಕುರಿತು ಲೋಕಾಯುಕ್ತ ತನಿಖೆ ನಡೆಯಬೇಕು. ಇಲ್ಲದಿದ್ದಲ್ಲಿ ವಿರೋಧ ಪಕ್ಷದ ನಾಯಕನಾಗಿ ನಾನೇ ಲೋಕಾಯುಕ್ತರಿಗೆ ದೂರು ನೀಡುವೆ" ಎಂದು ಎಚ್ಚರಿಸಿದರು.

"ರೈತರು, ಅಧಿಕಾರಿಗಳಿಗೆ ಸರ್ಕಾರ ಆತ್ಮಹತ್ಯೆ ಭಾಗ್ಯ ನೀಡುತ್ತಿದ್ದರೆ, ನವಜಾತ ಶಿಶುಗಳಿಗೆ ಮತ್ತು ಬಾಣಂತಿಯರಿಗೆ ಸಾವಿನ ಭಾಗ್ಯ ಕರುಣಿಸುತ್ತಿದೆ. ಪರಿಸ್ಥಿತಿ ಹೀಗಿದ್ದರೂ, ಈಗ ಹಾಸನದಲ್ಲಿ ಸಮಾವೇಶ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ?. ಜನರು ಇನ್ನು ಮುಂದೆ ಎರಡು ಸಾವಿರ ರೂಪಾಯಿ ಬೇಡ, ಆರೋಗ್ಯ ಭಾಗ್ಯ ಕೊಡಿ ಎಂದು ಕೇಳುತ್ತಾರೆ" ಎಂದರು.

ಇದನ್ನೂ ಓದಿ:ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ: ಕರ್ತವ್ಯಲೋಪಕ್ಕೆ ಡ್ರಗ್ ಕಂಟ್ರೋಲರ್ ಸಸ್ಪೆಂಡ್: ಸಿಎಂ ಸಿದ್ದರಾಮಯ್ಯ ಆದೇಶ

ABOUT THE AUTHOR

...view details