ಕರ್ನಾಟಕ

karnataka

ETV Bharat / state

ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆ ತೆರೆಸಿ ಸೈಬರ್ ವಂಚನೆಗೆ ಬಳಕೆ: ರಾಜಸ್ಥಾನ ಮೂಲದ ನಾಲ್ವರ ಬಂಧನ - CYBER FRAUD

ಹಣ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು, ರಾಜಸ್ಥಾನದ ಉದಯ್ ಪುರದಲ್ಲಿದ್ದ ಇಬ್ಬರು ಹಾಗೂ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಪಿಜಿಯಲ್ಲಿ ತಂಗಿದ್ದ ಇಬ್ಬರ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Arrested Accused
ಬಂಧಿತ ಆರೋಪಿಗಳು (ETV Bharat)

By ETV Bharat Karnataka Team

Published : Nov 15, 2024, 2:47 PM IST

ಬೆಂಗಳೂರು:ಆನ್‌ಲೈನ್‌ ಹೂಡಿಕೆ ಹೆಸರಿನಲ್ಲಿ ವಂಚಿಸಲು ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆಗಳನ್ನು ತೆರೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಅಭಯ್ ದಾನ್ ಚರಣ್ (19), ಅರವಿಂದ್ ಕುಮಾರ್ (19), ಪವನ್ ಬಿಷ್ಣೋಯಿ (18) ಹಾಗೂ ಸವಾಯಿ ಸಿಂಗ್ (21) ಬಂಧಿತ ಆರೋಪಿಗಳು.

ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು ಆನ್‌ಲೈನ್‌ನಲ್ಲಿ ರೇಟಿಂಗ್ ನೀಡುವ ಪಾರ್ಟ್ ಟೈಂ ಕೆಲಸ ಮಾಡಿದರೆ ಲಾಭ ನೀಡುವುದಾಗಿ ನಂಬಿಸುತ್ತಿದ್ದರು. ಆರಂಭದಲ್ಲಿ ಲಾಭಾಂಶ ನೀಡುತ್ತಿದ್ದ ಆರೋಪಿಗಳು, ನಂಬಿಕೆ ಗಳಿಸಿದ ಬಳಿಕ ಆನ್‌ಲೈನ್‌ ವೇದಿಕೆಗಳಲ್ಲಿ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚು ಲಾಭಾಂಶ ನೀಡುವುದಾಗಿ ಹಣ ಪಡೆದು ವಂಚಿಸುತ್ತಿದ್ದರು. ಈ ರೀತಿ ವಂಚಿಸಲು ಅಗತ್ಯವಿರುವ ಬ್ಯಾಂಕ್ ಖಾತೆಗಳಿಗಾಗಿ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿತರು, "ಕರೆನ್ಸಿ ಎಕ್ಸ್​ಚೇಂಜ್ ಮಾಡಲು ಬ್ಯಾಂಕ್ ಖಾತೆಗಳ ಅವಶ್ಯಕತೆಯಿದ್ದು, ಬ್ಯಾಂಕ್ ಖಾತೆಯನ್ನು ಮಾಡಿಸಿಕೊಟ್ಟಲ್ಲಿ ನಿಮಗೆ ಲಾಭಾಂಶವನ್ನು ಕೊಡುವುದಾಗಿ" ಅಮಿಷವೊಡ್ಡುತ್ತಿದ್ದರು. ಬಳಿಕ ಅವರಿಂದ ಬ್ಯಾಂಕ್ ಖಾತೆ ತೆರೆಸಿ ಪಾಸ್‌ಬುಕ್, ಚೆಕ್‌ಬುಕ್, ಎಟಿಎಂ ಕಾರ್ಡ್ ಹಾಗೂ ಖಾತೆ ತೆರೆಯಲು ಬಳಸಿದ ಸಿಮ್ ಕಾರ್ಡ್ ಪಡೆದುಕೊಂಡು ಅವುಗಳನ್ನು ವಂಚನೆಗೆ ಬಳಸುತ್ತಿದ್ದರು.

ತನಿಖೆ ಬಳಿಕ ಬಯಲಾಯ್ತು ಮೋಸ:ಇದೇ ರೀತಿ ಆರೋಪಿಗಳ ಜಾಲದಿಂದ 12.43 ಲಕ್ಷ ರೂ. ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ವಂಚನೆಗೆ ಬಳಕೆಯಾದ ಬ್ಯಾಂಕ್ ಖಾತೆಗಳ ವಿವರ ಆಧರಿಸಿ ಖಾತೆದಾರನನ್ನು ಕರೆತಂದು ವಿಚಾರಣೆಗೊಳಪಡಿಸಿದಾಗ ಆತ ವಿದ್ಯಾರ್ಥಿಯಾಗಿದ್ದು, ರಾಜಸ್ಥಾನ ಮೂಲದ ಆರೋಪಿಗಳು ಬ್ಯಾಂಕ್ ಖಾತೆ ತೆರೆಸಿ ವಂಚನೆಗೆ ಬಳಸಿರುವುದು ಪತ್ತೆಯಾಗಿತ್ತು. ಅದರನ್ವಯ ರಾಜಸ್ಥಾನದ ಉದಯ್ ಪುರದಲ್ಲಿದ್ದ ಇಬ್ಬರು ಹಾಗೂ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಪಿಜಿಯಲ್ಲಿ ತಂಗಿದ್ದ ಇಬ್ಬರ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸುತ್ತಿದ್ದ 19 ಮೊಬೈಲ್ ಫೋನ್‌ಗಳು, 2 ಲ್ಯಾಪ್‌ ಟಾಪ್ ಹಾಗೂ 20 ಸಿಮ್ ಕಾರ್ಡ್‌ಗಳು, ವಿದ್ಯಾರ್ಥಿಗಳಿಂದ ತೆರೆಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ 34 ಬ್ಯಾಂಕ್ ಪಾಸ್‌ಬುಕ್‌ಗಳು, 106 ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, 39 ಬ್ಯಾಂಕ್ ಚೆಕ್​ಬುಕ್‌ಗಳು ಹಾಗೂ 75 ಸಾವಿರ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ವಿದ್ಯಾರ್ಥಿಗಳಿಂದ ತೆರೆಸಿದ ಬ್ಯಾಂಕ್ ಖಾತೆಗಳನ್ನು ಬಳಸಿ ವಂಚನೆಯಿಂದ ಗಳಿಸಿದ ಹಣವನ್ನು ವಿತ್ ಡ್ರಾ ಮಾಡಿ, ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು, ಆ ಖಾತೆಗಳಿಂದ ಕ್ರಿಪ್ಟೋ ಕರೆನ್ಸಿ ಖರೀದಿಸಿ ಅದನ್ನು ಡಿಜಿಟಲ್ ವಾಲೆಟ್‌ಗಳಿಗೆ ವರ್ಗಾವಣೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭದಾಸೆ ತೋರಿಸಿ ವಂಚನೆ: ₹10.45 ಕೋಟಿ ಕಳ್ಕೊಂಡ ಮಹಿಳೆ!

ABOUT THE AUTHOR

...view details