ಉಡುಪಿ:ಕುಂದಾಪುರದಲ್ಲಿ ಕಳೆದ ಕೆಲ ಸಮಯದಿಂದ ಪ್ರತೀ ವಾರ ಕೋಡಿ ಕಿನಾರೆಯ ಪರಿಸರ ಸ್ವಚ್ಛಗೊಳಿಸುವ 'ಕ್ಲೀನ್ ಕುಂದಾಪುರ ಯೋಜನೆ'ಯ ಸ್ವಯಂ ಸೇವಕರು, ಬೀಚ್‌ನ 200-300 ಮೀ. ವಿಸ್ತಾರದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಸಿದ ಸ್ವಚ್ಛತಾ ಕಾರ್ಯದಲ್ಲಿ ಕನಿಷ್ಠ 1 ಟನ್ ಪಾದರಕ್ಷೆಗಳೊಂದಿಗೆ ವೈದ್ಯಕೀಯ, ಇತರ ತ್ಯಾಜ್ಯಗಳನ್ನು ಗುರುತಿಸಿ ಸಂಗ್ರಹಿಸಿದ್ದಾರೆ. ಕಳೆದ ವಾರವೂ ಇದೇ ಮಾದರಿಯಲ್ಲಿ ತ್ಯಾಜ್ಯ ಸಂಗ್ರಹವಾಗಿತ್ತು.
ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಬೀಳುತ್ತಿರುವ ಮಹಾ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ನದಿ, ಹಳ್ಳ ಹಾಗೂ ತೋಡುಗಳ ಸಂಗ್ರಹಿತ ತ್ಯಾಜ್ಯ ನೀರಿನೊಂದಿಗೆ ಹರಿದು ಸಮುದ್ರ ಸೇರುತ್ತಿದೆ. ಬಹುತೇಕ ಅಣೆಕಟ್ಟುಗಳು ಭರ್ತಿಯಾಗಿರುವುದರಿಂದ ಅಲ್ಲಿಂದ ಹೊರಬರುವ ನೀರು ಸಹ ಸಮುದ್ರ ಸೇರುತ್ತಿದೆ. ನೀರಿನೊಂದಿಗೆ ಸಮುದ್ರ ಸೇರುವ ಈ ತ್ಯಾಜ್ಯಗಳನ್ನು ಅಲೆಗಳು ಮತ್ತೆ ತೀರ ಪ್ರದೇಶಕ್ಕೆ ತರುವುದರಿಂದ ಸಮುದ್ರ ಕಿನಾರೆಯ ಪರಿಸರದಲ್ಲಿ ಪಾದರಕ್ಷೆಗಳು, ಪ್ಲಾಸ್ಟಿಕ್, ವೈದ್ಯಕೀಯ ತ್ಯಾಜ್ಯಗಳು ಎಲ್ಲೆಂದರಲ್ಲಿ ರಾಶಿ ಬಿದ್ದಿವೆ.
ನಿರಂತರವಾಗಿ ತ್ಯಾಜ್ಯ ಸಂಗ್ರಹಣೆಯ ಮೂಲಕ ಕಿನಾರೆಯ ಸ್ವಚ್ಛತೆ ಕಾಪಾಡಲು ಶ್ರಮಿಸುತ್ತಿರುವ ಕ್ಷೀನ್ ಕುಂದಾಪುರದ ಕಾರ್ಯಕರ್ತರು ಪಂಚ ಗಂಗಾವಳಿ ನದಿಗೆ ಹೊಂದಿಕೊಂಡಿರುವ ಕಡಲ ತೀರದಲ್ಲಿ ತ್ಯಾಜ್ಯದ ಹಠಾತ್ ಏರಿಕೆಯನ್ನು ಗಮನಿಸಿದ್ದಾರೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಹರಿಯುವ ವರಾಹಿ, ಸೌಪರ್ಣಿಕಾ, ಖೇಟಾ, ಕುಬ್ಜಾ ಚಕ್ರಾ ನದಿಗಳ ನೀರು, ಪಂಚ ಗಂಗಾವಳಿಯಲ್ಲಿ ಸಂಗಮವಾಗಿ ಅರಬ್ಬಿಯ ಕಡಲು ಸೇರುವುದರಿಂದ ಸಹಜವಾಗಿ ಎರಡು ತಾಲೂಕಿನ ನದಿ ತೀರ ಪ್ರದೇಶಗಳಿಗೆ ಬಂದು ಬೀಳುವ ತ್ಯಾಜ್ಯಗಳು ಒಟ್ಟಾಗಿ ಪಂಚ ಗಂಗಾವಳಿಯಲ್ಲಿ ಸೇರಿ ಅರಬ್ಬಿ ಕಡಲು ಪ್ರವೇಶಿಸುತ್ತದೆ.
ಕ್ಲೀನ್ ಕುಂದಾಪುರ ಸ್ವಯಂ ಸೇವಕರಿಂದ ಸ್ವಚ್ಛತೆ:ಸಮುದ್ರ ಕಿನಾರೆ ಸ್ವಚ್ಛವಾಗಿಡುವ ಮೂಲಕ ಸುಂದರ ಕುಂದಾಪುರದ ಕನಸುಗಳನ್ನು ಕಾಣುತ್ತಿರುವ ಕ್ಲೀನ್ ಕುಂದಾಪುರ ಸ್ವಯಂ ಸೇವಾ ಸಂಘಟನೆಯಲ್ಲಿ ಸೀಮಿತ ಕಾರ್ಯಕರ್ತರಿದ್ದರೂ ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಸ್ಥಳೀಯ ಪುರಸಭೆ, ಅರಣ್ಯ ಇಲಾಖೆಯ ಸಹಕಾರ ಹಾಗೂ ಮಾರ್ಗದರ್ಶನವನ್ನು ಪಡೆದುಕೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತಂಡದವರ ಕಾರ್ಯಶೈಲಿಯನ್ನು ಮೆಚ್ಚಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನ್ಯಾಯಾಧೀಶರು ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಅಭಿನಂದಿಸಿದ್ದಾರೆ.