ಚಿಕ್ಕಮಗಳೂರು: ಒಂದೇ ಕುಟುಂಬದ ಸದಸ್ಯರು ಕಾಫಿನಾಡಿನ ಪ್ರವಾಸಿ ತಾಣದ ಸೌಂದರ್ಯ ಸವಿಯಲು ಆಗಮಿಸಿದ್ದರು. ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ದತ್ತಪೀಠದ ಗುಹೆಯಲ್ಲಿ ದರ್ಶನ ಪಡೆದು ಅಲ್ಲಿಂದ ಪವಿತ್ರ ಜಲಪಾತ ಮಾಣಿಕ್ಯಧಾರಾಕ್ಕೆ ಹೊರಟಿದ್ದರು. ಆದ್ರೆ ಕಿರಿದಾದ ತಿರುವಿನ ಹಾದಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಿನಿ ಬಸ್ ಉರುಳಿ ಬಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ರೆ 29 ಮಂದಿ ಗಾಯಗೊಂಡಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಚಿಕ್ಕಮಗಳೂರು ತಾಲೂಕಿನ ಐ.ಡಿ ಪೀಠ - ಮಾಣಿಕ್ಯಧಾರಾ ನಡುವಿನ ತಿರುವಿನಲ್ಲಿ ಇಂದು ಮಧ್ಯಾಹ್ನ ಈ ಮಿನಿ ಬಸ್ ಪಲ್ಟಿಯಾಗಿದೆ. ತಿರುವಿನಲ್ಲಿ ಚಾಲಕ ನಿಯಂತ್ರಣ ತಪ್ಪಿ ಇಳಿಜಾರು ಪ್ರದೇಶಕ್ಕೆ ವಾಹನ ಬಿದ್ದಿದೆ. ಹತ್ತಾರು ಆಂಬ್ಯುಲೆನ್ಸ್, ಜೀಪ್ ಮೂಲಕ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕಾರ್ಯಕ್ಕೆ ಸ್ಥಳೀಯರು ಸಹಾಯ ಮಾಡಿದ್ದಾರೆ. ಆಸ್ಪತ್ರೆಯ ಮುಂಭಾಗ ನೂರಾರು ಜನರು ಸೇರಿ ಗಾಯಾಳುಗಳನ್ನು ವಿಚಾರಿಸಿದ್ದಾರೆ.
ಈ ಮಿನಿ ಬಸ್ನಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನಿಂದ ಐ.ಡಿ ಪೀಠಕ್ಕೆ 30 ಜನರು ಆಗಮಿಸಿದ್ದರು. ಗಾಡಿ ಪಲ್ಟಿಯಾದ ತಕ್ಷಣವೇ ಆಂಬ್ಯುಲೆನ್ಸ್, ಸ್ಥಳೀಯರ ಜೀಪ್ಗಳ ಮೂಲಕ ಚಿಕ್ಕಮಗಳೂರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. 30 ಮಂದಿ ಪೈಕಿ 6 ಮಂದಿಯ ಸ್ಥಿತಿ ಗಂಭೀರವಾಗಿದೆ. ಬಸ್ ಚಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳುಹಿಸಿಕೊಡಲಾಗಿದೆ. 6 ವರ್ಷದ ಬಾಲಕ ಮೊಹಮ್ಮದ್ ನವಾಜ್ ಬಸ್ ಕೆಳ ಭಾಗದಲ್ಲಿ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆ ನೀಡಿದ್ರೂ ದುರಾದೃಷ್ಟವಶಾತ್ ಬಾಲಕ ಮೃತಪಟ್ಟಿದ್ದಾನೆ. ಅಪಘಾತದಲ್ಲಿ 8 ಮಂದಿ ಮಹಿಳೆಯರು, 6 ಮಕ್ಕಳು ಸೇರಿ 30 ಜನರಿದ್ದರು.
ಐ.ಡಿ. ಪೀಠದಿಂದ ಮಾಣಿಕ್ಯದಾರಾಕ್ಕೆ ತೆರಳೋ ರಸ್ತೆಯೇ ಅತಿ ಕಿರಿದಾಗಿದೆ. ಎಷ್ಟೇ ಜಾಗರೂಕತೆಯಿಂದ ಸಾಗಿದರೂ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ. ಅಂತಹ ರಸ್ತೆಯಲ್ಲಿ ಮಿನಿ ಬಸ್ಗಳು ಸೇರಿದಂತೆ ಭಾರಿ ವಾಹನಗಳನ್ನು ಸಂಪೂರ್ಣ ನಿಷೇಧಿಸಿ ಎನ್ನುವ ಬೇಡಿಕೆಯನ್ನು ಚಿಕ್ಕಮಗಳೂರು ಭಾಗದ ಜನರು ಜಿಲ್ಲಾಡಳಿತದ ಮುಂದಿಟ್ಟಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಮುಂದಾದರೂ ಜಿಲ್ಲಾಡಳಿತ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಚಾಮರಾಜನಗರ: ನಾಳೆ ಮರು ಮತದಾನ, ಇಂಡಿಗನತ್ತದತ್ತ ಇವಿಎಂ ಹಿಡಿದು ತೆರಳಿದ ಸಿಬ್ಬಂದಿ - RE POLLING