ಬೆಂಗಳೂರು:ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಪ್ರತಿಯೊಬ್ಬರ ವರ್ಗಾವಣೆಗೂ ಪ್ರತ್ಯೇಕ ಕಾರಣ ನೀಡುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ತಮ್ಮನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮ ಎತ್ತಿ ಹಿಡಿದಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದ (ಕೆಎಟಿ) ಕ್ರಮ ಪ್ರಶ್ನಿಸಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿದ್ದ ಹೆಚ್.ಎಸ್.ವೀಣಾ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ಪೀಠ ಈ ಆದೇಶ ನೀಡಿ ಅರ್ಜಿಗಳನ್ನು ವಜಾಗೊಳಿಸಿದೆ.
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಸರ್ಕಾರದಲ್ಲಿ ವರ್ಗಾವಣೆ ಮಾಡಬಹುದಾದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರ ತಾನು ಬಯಸಿದ ಹುದ್ದೆಯಲ್ಲಿ ದೀರ್ಘಕಾಲ ಉಳಿದುಕೊಳ್ಳುವ ಹಕ್ಕು ಹೊಂದಿರುವುದಿಲ್ಲ ಎಂದಿದೆ.
ಜೊತೆಗೆ, ಸರ್ಕಾರದ ನೌಕರರನ್ನು ನಿಗದಿತ ಅವಧಿಗಿಂತಲೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಮುಂದುವರೆಸಲು ಅವಕಾಶ ನೀಡಿದಲ್ಲಿ ಅವರು ಸ್ಥಳೀಯವಾಗಿ ಸಂಬಂಧಗಳನ್ನು ಬೆಳೆಸಿಕೊಳ್ಳುವುದಕ್ಕೆ ಕಾರಣವಾಗಲಿದೆ. ಅಲ್ಲದೇ, ಪಟ್ಟಭದ್ರ ಹಿತಾಸಕ್ತಿಯತ್ತ ಒತ್ತು ನೀಡುವ ಸಾಧ್ಯತೆಯಿರಲಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಅಲ್ಲದೇ, ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆಯದೇ ಅರ್ಜಿದಾರರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಪ್ರಕರಣ ಸಂಬಂಧದ ದಾಖಲೆಗಳನ್ನು ಪರಿಶೀಲಿಸಿದಲ್ಲಿ ಅರ್ಜಿದಾರರನ್ನು ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆದೇ ವರ್ಗಾವಣೆ ಮಾಡಲಾಗಿದೆ ಎಂಬ ಅಂಶ ಗೊತ್ತಾಗಲಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಜೊತೆಗೆ, ಅರ್ಜಿದಾರರೆಲ್ಲರ ದಾಖಲೆಗಳನ್ನು ಪರಿಶೀಲಿಸಿದಾದ ಒಂದೇ ಸ್ಥಳದಲ್ಲಿ ಒಂದಲ್ಲಾ ಒಂದು ಹುದ್ದೆಯಲ್ಲಿ ಗಣನೀಯವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂಬ ಅಂಶ ಗೊತ್ತಾಗುತ್ತದೆ. ಅಲ್ಲದೇ, ರಾಜ್ಯ ಸರ್ಕಾರ ಪ್ರತಿಯೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುವುದಕ್ಕೆ ಕಾರಣಗಳನ್ನು ನಿಗದಿಪಡಿಸುವುದು ಕಷ್ಟವಾಗಿದೆ. ಅರ್ಜಿದಾರರನ್ನು ವರ್ಗಾವಣೆ ಮಾಡುವುದಕ್ಕೆ ಕಾರಣ ನೀಡಲೇಬೇಕು ಎಂಬುದು ಅನಿವಾರ್ಯವಲ್ಲ ಎಂದು ಕೋರ್ಟ್ ಹೇಳಿದೆ.
ಅಲ್ಲದೆ, ಕೆಎಟಿಯು ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿದ ಬಳಿಕವೇ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದ್ದು, ಆಡಳಿತಾತ್ಮಕ ಹಿತದೃಷ್ಠಿಯಿಂದ ವರ್ಗಾವಣೆ ಮಾಡಿದೆ ಎಂದು ತಿಳಿಸಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ಹೀಗಿರುವಾಗ ಕೆಎಟಿ ಆದೇಶದಲ್ಲಿ ಯಾವುದೇ ದೋಷ ಕಂಡು ಬರುತ್ತಿಲ್ಲ. ಹೀಗಾಗಿ, ಆ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿ ಅರ್ಜಿಗಳನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ:ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ನಿರ್ದೇಶನ ವಿಭಾಗದಲ್ಲಿ ಉಪ ಆಯುಕ್ತರಾಗಿದ್ದ ಹೆಚ್.ಎಸ್. ವೀಣಾ, ಸಿ.ಪುಷ್ಪಾ, ಜಿಎಸ್‌ಟಿ ವಿಭಾಗದ ಉಪ ಆಯುಕ್ತ ವಿ.ಆರ್.ಮಂಜುಳಾ, ಸಹಾಯಕ ಆಯುಕ್ತರಾದ ಎನ್.ಸಿ ಶೈಲಾ, ಇ-ಗೌರ‍್ನೆನ್ಸ್ ವಿಭಾಗದ ಹೆಚ್ಚುವರಿ ಆಯುಕ್ತ ಕೆ.ಎಸ್.ಬಸವರಾಜು ಎಂಬುವರನ್ನು 2022ರ ಜೂನ್ 22ರಂದು ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದಾದ ಬಳಿಕ ಒಂದು ವರ್ಷ ಎರಡು ತಿಂಗಳು ಮುಗಿಯುವುದಕ್ಕೂ ಮುನ್ನ ಮತ್ತೆ ವರ್ಗಾವಣೆ ಮಾಡಲಾಗಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಕೆಎಟಿಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿಗಳನ್ನು ಕೆಎಟಿ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಎಲ್ಲ ಅರ್ಜಿದಾರರು ಪ್ರತ್ಯೇಕವಾಗಿ ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ:ಜಮೀನು ಸ್ವಾಧೀನಕ್ಕೂ ಮುನ್ನ ಅಧ್ಯಯನ ನಡೆಸಿ: ಕೆಐಎಡಿಬಿಗೆ ಹೈಕೋರ್ಟ್ ನಿರ್ದೇಶನ