ಹಾವೇರಿ : ಜಿಲ್ಲೆಯಾದ್ಯಂತ ಸಡಗರ, ಸಂಭ್ರಮ, ಭಕ್ತಿಯಿಂದ ವೈಕುಂಠ ಏಕಾದಶಿ ಆಚರಿಸಲಾಯಿತು. ವೆಂಕಟೇಶ್ವರ ದೇವಸ್ಥಾನಗಳಲ್ಲಿ ವಿಶೇಷವಾದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನ ವಿಶಿಷ್ಠವಾಗಿ ಆಚರಿಸಲಾಯಿತು. ವೆಂಕಟೇಶ್ವರ ದೇವಸ್ಥಾನದ ವೈಕುಂಠದ ಪ್ರತಿರೂಪವನ್ನ ಸೃಷ್ಠಿಸಲಾಗಿತ್ತು. ಮುಂಜಾನೆ ವೆಂಕಟೇಶ್ವರ ಮೂರ್ತಿಗೆ 16 ದ್ರವ್ಯಗಳಿಂದ ಮಹಾಭಿಷೇಕ ನಡೆಸಲಾಯಿತು.
8 ಗಂಟೆಗೆ ಗರ್ಭಗುಡಿಯಲ್ಲಿರುವ ವೆಂಕಟೇಶ್ವರನಿಗೆ ತುಳಸಿ ಅರ್ಪಣೆ ಮಾಡಿ, ಪಲ್ಲಕ್ಕಿಯೊಂದಿಗೆ ಮೂರ್ತಿಯ ಪ್ರದಕ್ಷಿಣೆ ಹಾಕಿಸಲಾಯಿತು. ವೈಕುಂಠ ಮಹಾದ್ವಾರ ನಿರ್ಮಿಸಿ ಶ್ರೀದೇವಿ ಭೂದೇವಿ ಸಹಿತ ವೆಂಕಟೇಶ್ವರ ಸ್ವಾಮಿಯ ಚರಪ್ರತಿಷ್ಠಾಪನೆ ಮಾಡಲಾಯಿತು. ಮುಂಜಾನೆ 10 ಗಂಟೆಯಿಂದ ಆರಂಭವಾದ ಸಾರ್ವಜನಿಕ ದರ್ಶನ ಸಂಜೆವರೆಗೆ ನಡೆಯಿತು.
ಸಾವಿರಾರು ಭಕ್ತರಿಂದ ಪೂಜೆ ಸಲ್ಲಿಕೆ: ಹಾವೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಸರತಿಯಲ್ಲಿ ನಿಂತು ವೆಂಕಟೇಶ್ವರನ ದರ್ಶನ ಪಡೆದು ಪುನೀತರಾದರು. ಬಂದ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ಪ್ರಸಾದ ಮತ್ತು ಲಡ್ಡು ವಿತರಿಸಿತು. ಅಲ್ಲದೆ ಮಹಿಳೆಯರಿಗೆ ಉಡಿತುಂಬಿ ಸತ್ಕರಿಸಲಾಯಿತು. ವೈಕುಂಠ ಏಕಾದಶಿ ಅಂಗವಾಗಿ ದೇವಸ್ಥಾನದಲ್ಲಿ ಭಜನೆ ವ್ಯವಸ್ಥೆ ಮಾಡಲಾಗಿತ್ತು.
ಈ ಕುರಿತು ದೇವಸ್ಥಾನದ ಅರ್ಚಕ ಕಿಶೋರ ಕುಲಕರ್ಣಿ ಅವರು ಮಾತನಾಡಿ, ''ವೈಕುಂಠ ಏಕಾದಶಿ ಅಂಗವಾಗಿ ಮುಂಜಾನೆಯಿಂದಲೇ ವಿವಿಧ ದ್ರವ್ಯಗಳಿಂದ ಅಭಿಷೇಕ ಸಲ್ಲಿಸಿ ಪೂಜೆ ಸಲ್ಲಿಸಿದ್ದೇವೆ. ತಿರುಪತಿಯಲ್ಲಿನ ವೆಂಕಟಸ್ವಾಮಿಗೆ ಯಾವ ರೀತಿ ಅಲಂಕಾರ ಮಾಡಲಾಗುತ್ತೋ ಅದೇ ರೀತಿ ವೆಂಕಟೇಶ್ವರನಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗಿದೆ. ಕಳೆದ ಐದು ವರ್ಷಗಳಿಂದ ನಾಗೇಂದ್ರಮಟ್ಟಿಯಲ್ಲಿ ವಿಜೃಂಭಣೆಯಿಂದ ವೈಕುಂಠ ಏಕಾದಶಿ ಆಚರಿಸಿಕೊಂಡು ಬರುತ್ತಿದ್ದೇವೆ. ಉತ್ತರಾಭಿಮುಖವಾಗಿ ವೈಕುಂಠದ್ವಾರ ಮಾಡಲಾಗಿದ್ದು, ಭಕ್ತರು ಅದರಲ್ಲಿ ಪ್ರವೇಶಿಸಿ ಕೃತಾರ್ಥರಾಗುತ್ತಾರೆ'' ಎಂದು ತಿಳಿಸಿದರು.
ಕಳೆದ ಏಳೆಂಟು ವರ್ಷಗಳಿಂದ ಆಚರಣೆ ಮಾಡುತ್ತಿದ್ದೇವೆ: ಆಡಳಿತ ಮಂಡಳಿ ಅಧ್ಯಕ್ಷ ಪ್ರಸಾದ್ ಮಾತನಾಡಿ, ''ವೈಕುಂಠ ಏಕಾದಶಿಯನ್ನ ನಾವು ಕಳೆದ ಏಳೆಂಟು ವರ್ಷಗಳಿಂದ ಆಚರಣೆ ಮಾಡುತ್ತಾ ಬಂದಿದ್ದೇವೆ. ಇಲ್ಲಿಗೆ ಬರುವ ಭಕ್ತರಿಗೆ ತುಪ್ಪದ ಲಾಡು ಪ್ರಸಾದ ನೀಡುತ್ತಿದ್ದೇವೆ'' ಎಂದರು.
''ಇವತ್ತಿನ ದಿನ ವಿಷ್ಣು ವೈಕುಂಠ ದ್ವಾರದಲ್ಲಿ ಕಾಣುತ್ತಾನೆ ಎಂಬ ಪ್ರತೀತಿ ಇರುವ ಕಾರಣ ಅದೇ ರೂಪದಲ್ಲಿ ವೈಕುಂಠ ದ್ವಾರ ರಚಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಅಧಿಕವಾಗುತ್ತಿದ್ದು, ವೆಂಕಟೇಶ್ವರ ನಮಗೆ ಒಳ್ಳೆಯದನ್ನ ಮಾಡಿದ್ದಾನೆ'' ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಜಯರಾಜ್ ತಿಳಿಸಿದರು.
''ದೇವಸ್ಥಾನಕ್ಕೆ ಬಂದು ತುಂಬಾ ಖುಷಿಯಾಯಿತು.ತುಂಬಾ ಚೆನ್ನಾಗಿ ಅಲಂಕಾರ ಮಾಡಿದ್ದಾರೆ. ಸಾಕ್ಷಾತ್ ವೈಕುಂಠಕ್ಕೆ ಹೋಗಿ ಬಂದಷ್ಟು ಸಂತೋಷವಾಯಿತು'' ಎಂದು ಭಕ್ತರಾದ ವೀಣಾ ಪಾಟೀಲ್ ತಿಳಿಸಿದರು.
''ದೇವಸ್ಥಾನಕ್ಕೆ ಕಳೆದ ಎರಡು ಮೂರು ವರ್ಷದಿಂದ ಬರುತ್ತಿದ್ದೇವೆ. ಬೇರೆ ಎಲ್ಲೂ ಕಾಣದ ವಿಶೇಷ ದೇವರು ಇಲ್ಲಿದೆ. ವೆಂಕಟೇಶ್ವರನ ಕೃಪಾಕಟಾಕ್ಷ ತಮ್ಮ ಮೇಲೆ ಇದೆ. ನಾವು ಬೇಡಿಕೊಂಡ ಹರಕೆಗಳೆಲ್ಲಾ ನೆರವೇರಿದೆ'' ಎಂದು ಭಕ್ತೆ ಗಾಯತ್ರಿ ತಿಳಿಸಿದರು.
ಮಧ್ಯ ಕರ್ನಾಟಕದ ಪ್ರದೇಶಗಳಲ್ಲಿ ಈ ರೀತಿ ಅಲಂಕಾರ ಮಾಡಿದ್ದನ್ನ ನೋಡಿದ್ದೇವೆ. ಆದರೆ ಹಾವೇರಿಯಲ್ಲಿ ಈ ತರಹ ಅಲಂಕಾರ ಮಾಡಿದ್ದು ಸಂತಸ ತಂದಿದೆ ಎಂದು ಭಕ್ತರು ಹೇಳಿದರು.
ಇದನ್ನೂ ಓದಿ : ಬೆಂಗಳೂರು: ಇಸ್ಕಾನ್ ದೇವಸ್ಥಾನಗಳಲ್ಲಿ ಸಂಭ್ರಮದ ವೈಕುಂಠ ಏಕಾದಶಿ ಉತ್ಸವ ಆಚರಣೆ - VAIKUNTHA EKADASHI