ಬೆಂಗಳೂರು: ಗೆಳತಿಯ ಮೇಲಿನ ಸಿಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕನನ್ನು ನಗರದ ಮಹಾದೇವಪುರ ಪೊಲೀಸ್ ಠಾಣೆ ಸಿಬ್ಬಂದಿ ರಕ್ಷಿಸಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಕೇರಳ ಮೂಲದ 26 ವರ್ಷದ ಯುವಕನನ್ನು ರಕ್ಷಣೆ ಮಾಡಲಾಗಿದೆ. ಗೆಳತಿಯೊಂದಿಗಿನ ಮನಸ್ತಾಪದಿಂದ ಬೇಸತ್ತು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.
ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಕೇರಳ ಮೂಲದ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದು, ಆಕೆಯೂ ಸಹ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಗುರುವಾರ ಮಧ್ಯರಾತ್ರಿ ಆಕೆಗೆ ವಿಡಿಯೋ ಕರೆ ಯುವಕ, ಮದ್ಯದ ಬಾಟಲ್ ಒಡೆದು ಅದರಿಂದ ಕೈ ಕೊಯ್ದುಕೊಂಡು ಕರೆ ಸ್ಥಗಿತಗೊಳಿಸಿದ್ದ.ಗೆಳತಿ ಮತ್ತೆ ಕರೆ ಮಾಡಿದರೆ ಸ್ವೀಕರಿಸಿರಲಿಲ್ಲ. ಆತಂಕಗೊಂಡ ಯುವಕನ ಗೆಳತಿ ಆತನ ಫೋನ್ ನಂಬರ್ ಸಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಯುವಕನ ನಂಬರ್ ಲೊಕೇಶನ್ ಮೂಲಕ ಆತ ವಾಸವಿದ್ದ ಪಿ.ಜಿ ಪತ್ತೆಹಚ್ಚಿದ ಪಿಎಸ್ಐಗಳಾದ ಪರಶುರಾಮ್ ಹಾಗೂ ಮಲ್ಲೇಶ್, ಸ್ಥಳಕ್ಕೆ ತೆರಳಿ ಯುವಕನನ್ನು ರಕ್ಷಿಸಿದ್ದಾರೆ. ಬಳಿಕ ಗಾಯಾಳು ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಚಿವರ ಆಪ್ತನೆಂದು ಹೇಳಿ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ: ಪ್ರಕರಣ ದಾಖಲು