ಬೆಂಗಳೂರು:ಆ ಸಮುದಾಯವನ್ನು ಕಡೆಗಣಿಸಬಾರದೆಂದು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಈ ಬಾರಿ ಅಂತಿಮ ಪ್ರಯತ್ನ ಮಾಡಿದೆವು. ಆದರೆ ಅವರಿಗೆ ನಮ್ಮ ಅವಶ್ಯಕತೆ ಇಲ್ಲ ಅಂತ ನಿನ್ನೆಯ ಫಲಿತಾಂಶ ಸಂದೇಶ ಕೊಟ್ಟಿದೆ.ಮುಂದಿನ ದಿನಗಳಲ್ಲಿ ಬೇರೆ ಸಮುದಾಯಗಳನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕೋ ಅದನ್ನು ಮಾಡ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಬೆಂಗಳೂರಲ್ಲಿಂದು ಮಾತನಾಡಿದ ಅವರು, ಯಾವುದೇ ಕಾರ್ಯಕರ್ತ ನಿಂತರೂ ಬರುತ್ತಿದ್ದ ನಮ್ಮ ಸಾಂಪ್ರದಾಯಿಕ ಕನಿಷ್ಟ 60 ಸಾವಿರ ಮತಗಳು ಈಗ 87 ಸಾವಿರಕ್ಕೆ ಹೆಚ್ಚಿದೆ. ಪಕ್ಷದ ಅಭಿಮಾನಿಗಳಾಗಿರುವ ಜನರು ನಮ್ಮ ಕೈಬಿಟ್ಟಿಲ್ಲ. ಒಂದು ಸಮುದಾಯದ ಪರವಾಗಿ ದೇವೇಗೌಡರು ಹಿಂದೆ ನಿರ್ಣಯ ಕೈಗೊಂಡಿದ್ರು, ಮೀಸಲಾತಿ ವಿಚಾರ ಬಗ್ಗೆಯೂ ತೀರ್ಮಾನ ಮಾಡಿದ್ರು. ಈ ಚುನಾವಣೆಯಲ್ಲೂ ಆ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡಿದ್ವಿ. ಆದರೆ ನಮ್ಮ ಅವಶ್ಯಕತೆ ಅವರಿಗೆ ಇಲ್ಲ ಅಂತ ಆ ಸಮುದಾಯ ನಿನ್ನೆ ಸ್ಪಷ್ಟ ಸಂದೇಶ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಬೇರೆ ಸಮುದಾಯಗಳನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದರು.
ದೇವೇಗೌಡರು ರಾಜಕೀಯ ನಿವೃತ್ತಿ ಘೋಷಿಸಲಿ ಎಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ವಿಚಾರವಾಗಿ ಮಾತನಾಡಿದ ಅವರು, ದೇವೇಗೌಡರು ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಿಲ್ಲ. ಅವರ ವಯಸ್ಸು 92. ದೇಶ, ರಾಜ್ಯ ಕಟ್ಟಲು ಅವರ ಮಾರ್ಗದರ್ಶನ ಬೇಕು ಅಂತ ಅನೇಕ ವೇಳೆ ಪ್ರಧಾನಿಯವರೇ ಹೇಳಿದ್ದಾರೆ. ಹಾಗಾಗಿ ಇಲ್ಲಿ ಅಧಿಕಾರದ ದಾಹ, ಅಧಿಕಾರಕ್ಕೆ ಅಂಟಿಕೊಂಡು ದೇವೇಗೌಡರು ರಾಜಕಾರಣ ಮಾಡ್ತಿಲ್ಲ. ಕಳೆದ 62 ವರ್ಷಗಳ ಅವರ ಪ್ರಾಮಾಣಿಕ ರಾಜಕೀಯ ಬದುಕಿನಲ್ಲಿ ಏನನ್ನೂ ಅಪೇಕ್ಷೆ ಇಟ್ಟುಕೊಂಡವರಲ್ಲ. ಅವರು ಕೇವಲ ಮೂರೂವರೆ ವರ್ಷ ಮಾತ್ರ ಅಧಿಕಾರಾವಧಿ ನೋಡಿದ್ದಾರೆ. ಅವರು ನಿವೃತ್ತಿ ಹೊಂದಬೇಕಾ?. ಮುಂದುವರಿಬೇಕಾ ಅಂತ ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.