ಮಂಡ್ಯ :ಹನುಮ ಧ್ವಜ ವಿವಾದ ಭುಗಿಲೆದ್ದಿದ್ದ ಕೆರಗೋಡು ಗ್ರಾಮದ ಅರ್ಜುನ ಸ್ತಂಭದಲ್ಲಿ ಹೊಸದಾಗಿ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ಇದೀಗ ಜಿಲ್ಲಾಡಳಿತ ಹಳೆಯ ರಾಷ್ಟ್ರಧ್ವಜವನ್ನು ಬದಲಾಯಿಸಿ, ಹೊಸ ರಾಷ್ಟ್ರ ಧ್ವಜಾರೋಹಣ ಮಾಡಲಾಗಿದೆ.
ಕಳೆದ ಜನವರಿ 22ರ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೆನಪಿಗಾಗಿ ಕೆರಗೋಡಿನಲ್ಲಿ 108 ಅಡಿ ಎತ್ತರದ ಅರ್ಜುನ ಸ್ತಂಭದ ಮೇಲೆ ಹನುಮ ಧ್ವಜ ಹಾರಿಸಿದ್ದು ವಿವಾದ ಸೃಷ್ಟಿಸಿತ್ತು. ಹನುಮ ಧ್ವಜವನ್ನು ಸರ್ಕಾರ ತೆರವುಗೊಳಿಸಿ, ತ್ರಿವರ್ಣ ಧ್ವಜ ಹಾರಿಸಿತ್ತು. ಹನುಮ ಧ್ವಜ ತೆರವುಗೊಳಿಸಿದ್ದಕ್ಕೆ ಗ್ರಾಮಸ್ಥರು, ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.
ಮಂಗಳವಾರ ಬೆಳ್ಳಂಬೆಳಿಗ್ಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜು ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಬಳಿಕ ಮಾತನಾಡಿದ ಅವರು, ಕೆರಗೋಡು ಗ್ರಾಮದಲ್ಲಿ ಹಿಂದೆ ರಾಷ್ಟ್ರ ಧ್ವಜ ಹಾರಿಸಲಾಗಿತ್ತು. ಗಾಳಿಗೆ ಧ್ವಜ ಗಂಟಾಗಿ ಸರಿಯಾದ ರೀತಿಯಲ್ಲಿ ಹಾರುತ್ತಿರಲಿಲ್ಲ. ಹೀಗಾಗಿ ಹಳೆಯ ಧ್ವಜ ಬದಲಿಸಿ, ಹೊಸ ಧ್ವಜ ಹಾರಿಸಲಾಗಿದೆ. ಹಿಂದೆ ಇದ್ದ ಧ್ವಜದ ಅಳತೆಯಲ್ಲೇ ಈಗ ಹೊಸ ರಾಷ್ಟ್ರ ಧ್ವಜ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ರಾಷ್ಟ್ರ ಧ್ವಜ ಹಾರಿಸುತ್ತೇವೆ ಎಂದರು.