ಝಾನ್ಸಿ(ಉತ್ತರ ಪ್ರದೇಶ): ಝಾನ್ಸಿ ಜಿಲ್ಲೆಯ ಸ್ಥಳೀಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್‌ನಲ್ಲಿ ಶುಕ್ರವಾರ ತಡರಾತ್ರಿ ಭಾರಿ ಅಗ್ನಿ ಅವಘಡ ನಡೆದಿದೆ. ಈ ಭೀಕರ ಬೆಂಕಿ ಅಪಘಾತದಲ್ಲಿ ಸುಮಾರು 11 ನವಜಾತ ಶಿಶುಗಳು ಸುಟ್ಟು ಕರಕಲಾಗಿವೆ. ಮಕ್ಕಳ ವಾರ್ಡ್‌ನ ಕಿಟಕಿ ಒಡೆದು ಹಲವು ಕಂದಮ್ಮಗಳನ್ನು ರಕ್ಷಿಸಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.
ಜಿಲ್ಲಾಧಿಕಾರಿ ಸೇರಿದಂತೆ ಆಡಳಿತದ ಹಲವು ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಹಲವು ಪೊಲೀಸ್ ಠಾಣೆಗಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಇನ್ನು ಆಸ್ಪತ್ರೆಯಲ್ಲಿ ಮೌನ ಆವರಿಸಿದೆ. ತಮ್ಮ ಮಕ್ಕಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಅಪಘಾತದ ಸಮಯದಲ್ಲಿ ಸುಮಾರು 54 ನವಜಾತ ಮಕ್ಕಳನ್ನು NICU ವಾರ್ಡ್‌ನಲ್ಲಿ ದಾಖಲಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಸಿರುವ ಜಿಲ್ಲಾಧಿಕಾರಿ ಅವಿನಾಶ್ ಕುಮಾರ್, ಪ್ರಾಥಮಿಕವಾಗಿ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವೆಂದು ಶಂಕಿಸಲಾಗಿದೆ. ಈ ಅವಘಡದಲ್ಲಿ 11 ಮಕ್ಕಳು ಸಾವನ್ನಪ್ಪಿದ್ದಾರೆ. ಸುಮಾರು 40 ಶಿಶುಗಳನ್ನು ಉಳಿಸಲಾಗಿದೆ. ಈ ಪೈಕಿ 16ಕ್ಕೂ ಹೆಚ್ಚು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ನಿಗಾ ವಹಿಸಲಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ ದಾಖಲಾದ ಮಕ್ಕಳ ವಯಸ್ಸು ಒಂದು ದಿನದಿಂದ ಒಂದು ತಿಂಗಳವರೆಗೆ ಇದೆ ಎಂದು ಹೇಳಿದರು.
ಸಿಎಂ ಯೋಗಿ ಪ್ರತಿಕ್ರಿಯಿಸಿ, ಘಟನೆ ಬಗ್ಗೆ ಮಾಹಿತಿ ಪಡೆದು ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ಝಾನ್ಸಿಗೆ ಕಳುಹಿಸಲಾಗಿದೆ. ಇದರೊಂದಿಗೆ ಝಾನ್ಸಿ ಕಮಿಷನರ್ ಮತ್ತು ಡಿಐಜಿಗೆ ಅಪಘಾತದ ತನಿಖೆಗೆ ಆದೇಶಿಸಲಾಗಿದೆ. ಎಲ್ಲ ಮಕ್ಕಳು ಕೂಡಲೇ ಗುಣಮುಖರಾಗಲಿ ಎಂದು ದೇವರ ಬಳಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು, ಈ ಅಧಿಕಾರಿಗಳು 12 ಗಂಟೆಗಳ ಒಳಗೆ ತಮ್ಮ ವರದಿಯನ್ನು ಸಲ್ಲಿಸಬೇಕು. ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜು ಬುಂದೇಲ್‌ಖಂಡದ ದೊಡ್ಡ ಆಸ್ಪತ್ರೆಯಾಗಿದೆ. ಜಿಲ್ಲೆಯ ಅನೇಕ ಕಡೆಗಳಿಂದ ಜನರು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ.
ರಾತ್ರಿ 10ರಿಂದ 10.30ರ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವಾರ್ಡ್‌ನಲ್ಲಿ ಹೊಗೆ ಬರುತ್ತಿರುವುದನ್ನು ನೋಡಿದ ಜನರು ಎಲ್ಲರನ್ನು ಎಚ್ಚರಿಸಿದ್ದಾರೆ. ಇದು ಏನೆಂಬುದು ಅರ್ಥವಾಗುವಷ್ಟರಲ್ಲಿ ಬೆಂಕಿ ಹರಡಿತು. ಹೆಚ್ಚಿನ ಮಕ್ಕಳು ಹೊಗೆ ಮತ್ತು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಉಸಿರಾಡುವುದೂ ಕಷ್ಟ! ಕಳಪೆ ವರ್ಗದಲ್ಲೇ ಮುಂದುವರೆದ ವಾಯು ಗುಣಮಟ್ಟ