ಬೆಂಗಳೂರೂ: ದೇಶದಲ್ಲಿ ಡ್ರೋನ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಐಡಿಯಾಫೋರ್ಜ್ ಟೆಕ್ನಾಲಜಿ ಲಿಮಿಟೆಡ್ ವಿನ್ಯಾಸಗೊಳಿಸಿರುವ ಮಾನವರಹಿತ ವೈಮಾನಿಕ ವಾಹನ (UAV) NETRA-5 ಇಂದು ಏರೋ ಇಂಡಿಯಾ 2025ರಲ್ಲಿ ಅನಾವರಣಗೊಂಡಿತು.
ಈ ಕುರಿತು 'ಈಟಿವಿ ಭಾರತ್' ಜೊತೆಗೆ ಮಾತನಾಡಿದ ಐಡಿಯಾಫೋರ್ಜ್‌ನ ಹಿರಿಯ ವ್ಯವಸ್ಥಾಪಕ ತುಷಾರ್, NETRA-5 ಡ್ರೋನ್‌ನ ಸಾಮರ್ಥ್ಯ, ವಿವಿಧ ವಲಯಗಳಲ್ಲಿ ಭದ್ರತೆ ಮತ್ತು ಕಣ್ಗಾವಲನ್ನು ಬಲಪಡಿಸುವಲ್ಲಿ ಅದರ ಪಾತ್ರದ ಕುರಿತು ವಿವರಿಸಿದರು.
"NETRA-5ನ್ನು ನಿರ್ದಿಷ್ಟವಾಗಿ ಸೇನೆ, ನೌಕಾಪಡೆ ಮತ್ತು ವಾಯುಪಡೆ ಮಾತ್ರವಲ್ಲದೆ ನಾಗರಿಕ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಗಡಿ ನಿರ್ವಹಣೆ, ಭದ್ರತಾ ಕಾರ್ಯಾಚರಣೆಗಳು, ಕಣ್ಗಾವಲು ಮತ್ತು ದೊಡ್ಡ ಪ್ರಮಾಣದ ಸಮೀಕ್ಷೆಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಲ್ಲದೇ ದಂಗೆಗಳನ್ನು ನಿಯಂತ್ರಿಸುವ ಕ್ರಮಗಳಿಗೆ, ಅಪರಾಧ ನಿಯಂತ್ರಣ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೂ ಅನುಕೂಲವಾಗುವಂತೆ ಸಜ್ಜುಗೊಳಿಸಲಾಗಿದೆ. ಸಮುದ್ರ ಗಡಿಗಳ ಭದ್ರತೆ ಮತ್ತು ಕಣ್ಗಾವಲಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ" ಎಂದು ತಿಳಿಸಿದರು.
"ಸರಿಸುಮಾರು 8 ಕೆ.ಜಿ ತೂಕದ NETRA-5, 10ರಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯ ಸಾಮರ್ಥ್ಯ ಹೊಂದಿದೆ ಹಾಗೂ ಇದು ಸತತ 75 ನಿಮಿಷಗಳವರೆಗೆ ಹಾರಬಲ್ಲದ್ದಾಗಿದ್ದು, 1.5 ರಿಂದ 2 ಕೆ.ಜಿವರೆಗಿನ ಪೇಲೋಡ್‌ಗಳನ್ನ ಸಾಗಿಸುವ ಸಾಮರ್ಥ್ಯವಿರುವ ಡ್ರಾಪ್ ಮೆಕ್ಯಾನಿಸಂ ಹೊಂದಿದೆ. ಹೆಚ್ಚು ನಿಖರ ಕಣ್ಗಾವಲಿಗಾಗಿ ಸಿದ್ಧಪಡಿಸಿದ NETRA-5ನಲ್ಲಿ ಹೈ ರೆಸಲ್ಯೂಶನ್ ಕ್ಯಾಮೆರಾವಿದ್ದು ಜೂಮ್ ಸಾಮರ್ಥ್ಯಗಳು ಮತ್ತು ಥರ್ಮಲ್ ಇಮೇಜಿಂಗ್‌ನ ಸೌಲಭ್ಯವಿದೆ" ಎಂದು ವಿವರಿಸಿದರು.