ಬೆಂಗಳೂರು: ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆದ್ದಿತ್ತು. ಅದಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ಪ್ರಯತ್ನ- ಅಳಿಲಸೇವೆ ಮಾಡುವೆ. ಅದಕ್ಕಾಗಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡುವೆ. ಪಕ್ಷದ ಸೂಚನೆಯಂತೆ ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.
ದೆಹಲಿಯಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿ ಕಳೆದ ರಾತ್ರಿ ಬೆಂಗಳೂರಿಗೆ ವಾಪಸ್ ಆಗಿದ್ದ ಜಗದೀಶ್ ಶೆಟ್ಟರ್, ಇಂದು ಅಪರಾಹ್ನ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಭೇಟಿ ನೀಡಿದರು. ಅವರನ್ನು ರಾಜ್ಯ ನಾಯಕರು ಆತ್ಮೀಯವಾಗಿ ಪಕ್ಷದ ಕಚೇರಿಗೆ ಬರಮಾಡಿಕೊಂಡರು. ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೆಟ್ಟರ್, ಕಾರ್ಯಕರ್ತರ ಆಶಯ, ಧ್ವನಿ, ರಾಜ್ಯ ನಾಯಕರ ಕರೆ, ರಾಷ್ಟ್ರೀಯ ನಾಯಕರ ಕರೆಗೆ ಸ್ಪಂದಿಸಿ ಬಿಜೆಪಿಗೆ ಮರಳಿದ್ದೇನೆ. ನೀವು ಹಿರಿಯ ನಾಯಕರು, ನಿಮಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ, ಗೌರವ ನೀಡುತ್ತೇವೆ ಎಂದು ಪಕ್ಷದ ಹಿರಿಯರು ತಿಳಿಸಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ, ವಿಧಾನಪರಿಷತ್ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ನಿನ್ನೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪುನರ್ ಸೇರ್ಪಡೆ ಆಗಿದ್ದೇನೆ. ರಾಷ್ಟ್ರೀಯ ನಾಯಕರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿದ್ದೇನೆ. ನನ್ನ ಜೊತೆ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಇತರ ನಾಯಕರು ಇದ್ದರು ಎಂದರು.
ಇದು ನಮ್ಮ ಮನೆ; ನಾವು ಕಟ್ಟಿ ಬೆಳೆಸಿದ ಮನೆ. ನಮ್ಮ ಕುಟುಂಬ ಬಿಜೆಪಿ ಜೊತೆ ಆತ್ಮೀಯತೆ ಹೊಂದಿದೆ. ಅಸೆಂಬ್ಲಿ ಚುನಾವಣೆ ವೇಳೆ ಕೆಲವೊಂದು ಘಟನೆಗಳ ಕಾರಣ ಕಾಂಗ್ರೆಸ್ ಸೇರಿದ್ದೆ. ಆಮೇಲೆ ಎಂಎಲ್‍ಸಿ ಆದೆ. ನರೇಂದ್ರ ಮೋದಿಯವರ 10 ವರ್ಷಗಳ ದೇಶದ ಆಡಳಿತ, ಉತ್ತಮ ಕೆಲಸ ಕಾರ್ಯ ಮಾಡಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ದೃಷ್ಟಿಯಿಂದ ಹಾಗೂ ನಮ್ಮ ದೇಶವು ಆರ್ಥಿಕವಾಗಿ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಬೇಕೆಂಬ ನಮ್ಮೆಲ್ಲರ, ಭಾರತದ ನೂರಾರು ಕೋಟಿ ಜನರ ಅಭಿಲಾಷೆಯಿದೆ. ಹೀಗಾಗಿ ನಾನು ಬಿಜೆಪಿಗೆ ಬಂದಿದ್ದೇನೆ ಎಂದು ತಿಳಿಸಿದರು.