ಬೆಳಗಾವಿ: 39ನೇ ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿಯಾಗಿದ್ದ ಬೆಳಗಾವಿ ವೀರಸೌಧ ಶತಮಾನೋತ್ಸವ ಆಚರಣೆಗೆ ಸಿದ್ಧಗೊಳ್ಳುತ್ತಿದೆ. ಸೌಧವು ಅಂದ-ಚೆಂದವಾಗುತ್ತಿದ್ದು, ಇಲ್ಲಿ ನೂತನವಾಗಿ ಅಳವಡಿಸಿರುವ ಗಾಂಧೀಜಿ ಡಿಜಿಟಲ್ ಫೋಟೋ ಗ್ಯಾಲರಿ ಎಲ್ಲರ ಗಮನ ಸೆಳೆಯಲಿದೆ. ಐತಿಹಾಸಿಕ ಸಮಾರಂಭಕ್ಕೆ ಹೇಗೆಲ್ಲ ನಡೆದಿದೆ ತಯಾರಿ ಎಂಬ ಕುತೂಹಲವೇ..... ಹಾಗಾದ್ರೆ ಈಟಿವಿ ಭಾರತ ವಿಶೇಷ ವರದಿ ಇಲ್ಲಿದೆ ನೋಡಿ.
1924ರ ಡಿ.26, 27ರಂದು ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಮಹಾತ್ಮಾ ಗಾಂಧೀಜಿ. ಬಾಪೂಜಿ ಅಧ್ಯಕ್ಷತೆ ವಹಿಸಿದ ಏಕೈಕ ಅಧಿವೇಶನ ಇದು. ಬೆಳಗಾವಿ ಟಿಳಕವಾಡಿ ಪ್ರದೇಶದ ಸ್ಥಳದಲ್ಲಿ ವಿಜಯನಗರ ಎಂದು ನಾಮಕರಣ ಮಾಡಿದ್ದ ಜಾಗದಲ್ಲಿ ಅಧಿವೇಶನ ಜರುಗಿತ್ತು. ಅಲ್ಲಿಯೇ ಬಾವಿಯೊಂದನ್ನು ನಿರ್ಮಿಸಲಾಗಿತ್ತು. ಈಗಲೂ ಅದು ಅಧಿವೇಶನಕ್ಕೆ ಸಾಕ್ಷಿಯಾಗಿ ನಿಂತಿದೆ.
ಕೃಷ್ಣ ಅವಧಿಯಲ್ಲಿ ವೀರಸೌಧ ನಿರ್ಮಾಣ: 2002ರಲ್ಲಿ ಎಸ್.ಎಂ. ಕೃಷ್ಣ ಅವರ ಸರ್ಕಾರ ಕಾಂಗ್ರೆಸ್ ಅಧಿವೇಶನ ನಡೆದ ಜಾಗವನ್ನು ಅವಿಸ್ಮರಣೀಯಗೊಳಿಸಲು ವೀರಸೌಧ ನಿರ್ಮಿಸಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಿ.ಬಿ. ಇನಾಮದಾರ್, ಜಿಲ್ಲಾಧಿಕಾರಿ ಅತುಲ್ ಕುಮಾರ ತಿವಾರಿ, ಸ್ವಾತಂತ್ಯ ಹೋರಾಟಗಾರ ಆರ್.ಎಚ್. ಕುಲಕರ್ಣಿ ಅವರ ಮುತುವರ್ಜಿಯಿಂದ ಸೌಧ ಅಲ್ಲಿ ತಲೆ ಎತ್ತಿತ್ತು. ಸೌಧದಲ್ಲಿ ಗಾಂಧೀಜಿ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರಾದ ಗಂಗಾಧರರಾವ್ ದೇಶಪಾಂಡೆ, ವಿಠಲರಾವ್ ಯಾಳಗಿ ಸೇರಿ ಮತ್ತಿತರರ ಮನೆಗಳಿಂದ ಸಂಗ್ರಹಿಸಿದ್ದ ಬಾಪೂಜಿ ಕಪ್ಪು-ಬಿಳುಪಿನ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಬಾವಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣ: ಇನ್ನು ಕಾಂಗ್ರೆಸ್ ಬಾವಿಯನ್ನು ಅಭಿವೃದ್ಧಿಪಡಿಸಿ, ಒಂದು ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಮಾಡಲಾಗಿತ್ತು. ಈಗ ಶತಮಾನೋತ್ಸವ ಹಿನ್ನೆಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾಡಳಿತ ಕೈಗೆತ್ತಿಕೊಂಡಿದೆ. ವೀರಸೌಧದೊಳಗಿದ್ದ ಗಾಂಧೀಜಿ ಕಪ್ಪು-ಬಿಳುಪಿನ 50ಕ್ಕೂ ಅಧಿಕ ಫೋಟೋಗಳಿಗೆ ಎಐ ತಂತ್ರಜ್ಞಾನದ ಮೂಲಕ ಆಧುನಿಕ ಸ್ಪರ್ಶ ನೀಡಲಾಗಿದೆ. ಅದು ಡಿಜಿಟಲ್ ಫೋಟೋ ಗ್ಯಾಲರಿ ಆಗಿ ಪರಿವರ್ತನೆ ಆಗಿದೆ. ಸೌಧದ ಆವರಣದಲ್ಲಿ ಗಾಂಧೀಜಿ ನೂತನ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸುತ್ತಿದ್ದು, ಈ ಎಲ್ಲಾ ಕಾಮಗಾರಿಗಳನ್ನು ಇದೇ 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಅಲ್ಲದೇ ಕಾಂಗ್ರೆಸ್ ಬಾವಿಯನ್ನೂ ಇನ್ನಷ್ಟು ಜೀರ್ಣೋದ್ದಾರ ಪಡಿಸಲಾಗಿದ್ದು, ಗೋಡೆಯ ಸುತ್ತಲೂ ಕೇಸರಿ-ಬಿಳಿ-ಹಸಿರು ಬಣ್ಣ ಬಳಿಯಲಾಗುತ್ತಿದೆ.
ಸಿಂಗಾರಗೊಳ್ಳುತ್ತಿದೆ ಅವಿಸ್ಮರಣೀಯ ವೀರಸೌಧ: ಸೌಧದೊಳಗಿನ ಗಾಂಧೀಜಿ ಪ್ರತಿಮೆ, ಸ್ವಾತಂತ್ರ್ಯ ಹೋರಾಟಗಾರರ ಉಬ್ಬು ಚಿತ್ರಗಳನ್ನು ಮತ್ತಷ್ಟು ಆಕರ್ಷಕಗೊಳಿಸಲಾಗಿದೆ. ಇನ್ನು ಆವರಣ ಗೋಡೆಗಳಿಗೂ ಬಣ್ಣ ಹಚ್ಚಲಾಗುತ್ತಿದೆ. ಅದೇ ರೀತಿ ಸೌಧದ ಸುತ್ತಲೂ ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಲಾಗಿದೆ. ಇಡೀ ವೀರಸೌಧದ ಸೌಂದರ್ಯೀಕರಣ ಭರದಿಂದ ಸಾಗಿದೆ. 26ರಂದು ಶತಮಾನೋತ್ಸವ ಕಾರ್ಯಕ್ರಮ ಇಲ್ಲಿಯೇ ನಡೆಯಲಿದ್ದು, ಸುಸಜ್ಜಿತ ವೇದಿಕೆ ಹಾಕಲಾಗುತ್ತಿದೆ. ಹಗಲು ರಾತ್ರಿ ಎನ್ನದೇ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ. ಯಾರಿಗೆ ಯಾವ ಜವಾಬ್ದಾರಿ.? ಮಹಾನಗರ ಪಾಲಿಕೆ ಸ್ವಚ್ಛತೆ ಜವಾಬ್ದಾರಿ ಹೊತ್ತಿದೆ. ನಿರ್ಮಿತಿ ಕೇಂದ್ರದವರು, ಇಡೀ ಸೌಧ, ಬಾವಿ, ಸ್ವಾತಂತ್ರ್ಯ ಸೈನಿಕರ ಉಬ್ಬುಚಿತ್ರಗಳಿಗೆ ಬಣ್ಣ ಬಳಿಯುವುದು ಮತ್ತು ಶೌಚಗೃಹ ನಿರ್ಮಾಣ. ಲ್ಯಾಂಡ್ ಆರ್ಮಿ ವೇದಿಕೆ ನಿರ್ವಹಣೆ, ಇನ್ನು ಹೆಸ್ಕಾಂ ಲೈಟಿಂಗ್ ವ್ಯವಸ್ಥೆ ಮಾಡುತ್ತಿದೆ.
ಜಿಲ್ಲಾಡಳಿತದಿಂದ ಭರ್ಜರಿ ಸಿದ್ಧತೆ: ಈಟಿವಿ ಭಾರತದ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, "ಜಿ.ಪಂ. ಸಿಇಓ ರಾಹುಲ್ ಶಿಂಧೆ ಅವರ ನೇತೃತ್ವದಲ್ಲಿ ವೀರಸೌಧದೊಳಗೆ ಆರ್ಟಿಪಿಸಿಯಲ್ ಇಂಟಲಿಜೆನ್ಸಿ ಸಹಾಯದಿಂದ ಹಳೆ ಫೋಟೋಗಳಿಗೆ ಬಣ್ಣದ ಸ್ಪರ್ಶ ನೀಡಲಾಗಿದೆ. ಹೊಸ ಫೋಟೋ ಗ್ಯಾಲರಿ ನಿರ್ಮಿಸಿದ್ದೇವೆ. ಇದು ತುಂಬಾ ಆಕರ್ಷಕವಾಗಿದೆ. ಅಲ್ಲದೇ ಕಾಂಗ್ರೆಸ್ ಬಾವಿ ದುರಸ್ಥಿ, ಸುಣ್ಣ-ಬಣ್ಣ ಬಳಿಯುವ ಕೆಲಸವೂ ನಡೆಯುತ್ತಿದೆ. ಎಲ್ಲವೂ ಕೊನೆಯ ಹಂತಕ್ಕೆ ಬಂದಿದೆ. ಇನ್ನು 26ರಂದು ವೀರಸೌಧದಲ್ಲಿ ಒಂದು ಕಾರ್ಯಕ್ರಮ ನಡೆಯಲಿದೆ. ಅದಕ್ಕೆ ಎಲ್ಲ ಪೂರ್ವ ಸಿದ್ಧತೆ ಕೈಗೊಂಡಿದ್ದೇವೆ" ಎಂದು ತಿಳಿಸಿದರು.
ಶತಮಾನೋತ್ಸವದ ಬಗ್ಗೆ ಕಾನೂನು ಸಚಿವರು ಹೇಳಿದ್ದಿಷ್ಟು: ಕಾನೂನು ಸಚಿವರು ಆಗಿರುವ ಅಧಿವೇಶನ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಮಾತನಾಡಿ, "1924ರ ಕಾಂಗ್ರೆಸ್ ಅಧಿವೇಶನದ ಇತಿಹಾಸವನ್ನು ಮೆಲಕು ಹಾಕಲು ಶತಮಾನೋತ್ಸವ ಆಚರಿಸಲಾಗುತ್ತಿದೆ. ಗಾಂಧೀಜಿ ಅವರ ನೇತೃತ್ವದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಇಂದಿನ ಜನರ ಸ್ಮೃತಿ ಪಟಲದ ಮೇಲೆ ತರುವ ಪ್ರಯತ್ನ ಇದಾಗಿದೆ. ಇನ್ನು ವೀರಸೌಧ ನವೀಕರಣ ಕೆಲಸ ನಡೆಯುತ್ತಿದೆ. ಒಳಗಿದ್ದ ಫೋಟೋಗಳನ್ನು ಆಧುನೀಕರಣಗೊಳಿಸಲಾಗಿದೆ. ವೀರಸೌಧ ಮುಂದೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಕೂಡ ನಡೆಯಲಿದೆ" ಎಂದು ಹೇಳಿದರು.
ಗಾಂಧಿ ಭಾರತ ಹೆಸರಿನಡಿ ವರ್ಷವಿಡೀ ಕಾರ್ಯಕ್ರಮ: "ಬೆಳಗಾವಿಯ ರಾಮತೀರ್ಥ ನಗರದಲ್ಲಿ ಗಂಗಾಧರರಾವ್ ದೇಶಪಾಂಡೆ ಅವರ ಸ್ಮಾರಕ ಭವನ ನಿರ್ಮಿಸಿದ್ದು, ಅಲ್ಲಿಯೂ ಫೋಟೋ ಗ್ಯಾಲರಿ ಸ್ಥಾಪಿಸಲಾಗಿದೆ. ಏಳು ದಿನಗಳ ಕಾಲ ತಂಗಿದ್ದ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಗಾಂಧೀಜಿ-ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಭವನವನ್ನೂ ಅಭಿವೃದ್ಧಿ ಪಡಿಸುತ್ತಿದ್ದೇವೆ. ಅಲ್ಲದೇ ಜಿಲ್ಲೆಯಲ್ಲಿರುವ ಗಾಂಧಿ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸುತ್ತೇವೆ. ಗಾಂಧಿ ಭಾರತ ಹೆಸರಿನಡಿ ವರ್ಷವಿಡೀ ಕಾರ್ಯಕ್ರಮಗಳು ನಡೆಯಲಿವೆ" ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಇದನ್ನೂ ಓದಿ: ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕಾದ ಖರ್ಚೆಷ್ಟು? ಶತಮಾನೋತ್ಸವಕ್ಕಾಗುವ ಖರ್ಚೆಷ್ಟು?