ಮೈಸೂರು: ಉತ್ತನಹಳ್ಳಿಯ ಹೊರವಲಯದಲ್ಲಿ ಆಯೋಜಿಸಿದ್ದ ಯುವ ದಸರಾದ ಮೂರನೇ ದಿನದ ಕಾರ್ಯಕ್ರಮ ಬಿಂದಾಸ್ ಬಾಲಿವುಡ್ ನೈಟ್ಸ್ಗೆ ಜನಸಾಗರವೇ ಹರಿದು ಬಂದಿತ್ತು. ಕಾರ್ಯಕ್ರಮದ ಉದ್ದಕ್ಕೂ ವಿವಿಧ ಚಿತ್ರಗಳ ಗಾಯನಗಳಿಗೆ ನೃತ್ಯ ಮಾಡುವುದರ ಮೂಲಕ ತಾರೆಯರು ನೋಡುಗರ ಕಣ್ಮನ ಸೆಳೆದರು.
ಬಾಲಿವುಡ್ ಖ್ಯಾತ ಗಾಯಕ ಬಾದ್ ಶಾ ಅವರು ವೇದಿಕೆ ಮೇಲೇರುತ್ತಿದ್ದಂತೆ ಪ್ರೋಪಪಾ ರೋಲ ಎಂದು ಡಿಜೆ ಬೀಟ್ಸ್ನೊಂದಿಗೆ ರ‍್ಯಾಪ್ ಮಾಡುವ ಮೂಲಕ ಯುವಕರು ಕುಳಿತಲ್ಲಿಯೇ ಕುಣಿದು ಕುಪ್ಪಳಿಸುವಂತೆ ಮಾಡಿದರು. 'ಹೇ ಲಡ್ಕಿ ಬ್ಯೂಟಿಫುಲ್ ಗರ್ಕೆ ಚುಲ್', 'ಮೇ ಪಾನಿ ಪಾನಿ ಹೋಗಾಯಿ', 'ಇಕು ಹೋಗಯ್ ಹಮಾ ಹಮಾ' ಹೀಗೆ ಇನ್ನಿತರ ಆಲ್ಬಮ್ ಗೀತೆಗಳ ಮೂಲಕ ಅವರ ಅಭಿಮಾನಿಗಳಾಗುವಂತೆ ಮಾಡಿತು.
ಮೈಸೂರು ಯುವ ದಸರಾ (ETV Bharat) ಕನ್ನಡದಲ್ಲಿ ಮಾತನಾಡಿದ ಬಾದ್ ಶಾ, "ನಾನು ಗಾಯಕನಲ್ಲ ನಾನೊಬ್ಬ ಬರಹಗಾರ ನನ್ನ ಭಾವನೆಯನ್ನು ಬರೆದು ಹಾಡುತ್ತೇನೆ" ಎಂದರು. ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ಕುಮಾರ್ ಅವರ 'ನೀನೇ ರಾಜಕುಮಾರ' ಗೀತೆಯನ್ನು ಹಾಡಿ ನಟನಿಗೆ ಗೌರವ ಸಮರ್ಪಿಸಿದರು.
ಸರಿಗಮಪ ಖ್ಯಾತಿಯ ಜಸ್ ಕರಣ್ ಸಿಂಗ್ ಅವರು 'ಮರುಭೂಮಿ ನಡುವೆ', 'ಜಗವೇ ನೀನು ಗೆಳತಿಯೇ' ಹಾಡುಗಳ ಮೂಲಕ ಮೈಸೂರು ಜನರಿಗೆ ರಸ ಸಂಜೆಯನ್ನು ಉಣಬಡಿಸಿದರು. 'ನಿನ್ನೆ ತನಕ ತಿಳಿಯದು ಪ್ರೇಮದ ಊರಿನ ದಾರಿ' ಹಾಗೂ ಗಣೇಶ್ ಅವರ 'ದ್ವಾಪರ ದಾಟುತ ನಿನ್ನನೆ ನೋಡಲು' ಎಂಬ ಗೀತೆಯ ಮೂಲಕ ಮೈಸೂರಿಗರನ್ನು ಮತ್ತೊಮ್ಮೆ ದ್ವಾಪರಕ್ಕೆ ಕರೆದೊಯ್ದರು.
ಮೈಸೂರಿನ ಹಿನ್ನೆಲೆ ಗಾಯಕಿ ಸಂಗೀತ ರವೀಂದ್ರನಾಥ್ ಅವರು, 'ಬೆಳಕಿನ ಕವಿತೆ ಬೆಳಗಿಗೆ ಸೋತೆ' ಎಂದು ಹಾಡುತ್ತಾ ಯುವಸಮೂಹದಲ್ಲಿ ಪ್ರೇಮದ ಪುಳಕ ಹೆಚ್ಚಿಸಿದರು. 'ತಾಯಿಗೆ ತಕ್ಕ ಮಗ' ಚಿತ್ರದ 'ಹೃದಯಕೆ ಹೆದರಿಕೆ', 'ಕಿರಿಕ್ ಪಾರ್ಟಿ' ಚಿತ್ರದ 'ತೂಗು ಮಂಚದಲ್ಲಿ ಕೂತು', 'ರಾಬರ್ಟ್' ಚಿತ್ರದ 'ಕಣ್ಣು ಹೊಡಿಯಾಕ್ಕ ನೆನ್ನೇ ಕಲತಾನಿ ನಿನ್ನ ನೋಡಿ ಸುಮ್ನೆ ಹೆಂಗ್ ಇರ್ಲಿ', 'ರನ್ನ' ಚಿತ್ರದ 'ನನ್ನ ಮನಸು ಹಾಡಿದೆ ತಿಥಲಿ ತಿಥಲಿ', ಶರಣ್ ಚಿತ್ರದ 'ಹೋನೆ ಹೊನೇ', 'ಖುಷಿ' ಚಿತ್ರದ 'ಕಳ್ಳ ಚಂದಮಾಮ ಅಂದ ಚಂದ ಪ್ರೇಮ', 'ಅಣ್ಣಾಬಾಂಡ್' ಚಿತ್ರದ 'ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು', 'ಆಕಸ್ಮಿಕ' ಚಿತ್ರದ 'ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡುಗಳನ್ನು ಹಾಡಿದರು.
ಮೈಸೂರು ಯುವ ದಸರಾ (ETV Bharat) ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಅನ್ನಭಾಗ್ಯ, ಶಕ್ತಿ, ಯುವನಿಧಿ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳ ಬಗ್ಗೆ ಹಾಗೂ ಸರ್ವ ಧರ್ಮ ಸಮಾನತೆ ಸಾರುವ ಅಂಶ ಒಳಗೊಂಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆಯ ಕುರಿತು ರಚಿತವಾದ ಗೀತೆಗೆ ನೃತ್ಯ ಮಾಡಿದರು. ಚಾಮರಾಜನಗರ ಕಲಾ ತಂಡವು ಜನಪದ ಸೊಗಡಿನ ಮಲೆ ಮಹದೇಶ್ವರನ ಮಹಿಮೆಯನ್ನು ಸಾರುವ ಜನಪದ ಗೀತೆಗೆ ಕಂಸಾಳೆ ನೃತ್ಯದ ಮೂಲಕ ಗಮನ ಸೆಳೆದರು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯೇಶ್ವರ ವಿದ್ಯಾಲಯದ ವಿದ್ಯಾರ್ಥಿಗಳು ಕಾಳಿ ದೇವಿಯ ಅವತಾರ ಕುರಿತು ಮನಮೋಹಕ ನೃತ್ಯದಿಂದ ರಂಜಿಸಿದರು.
ಕಲಾ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾಯಿ ಚಾಮುಂಡೇಶ್ವರಿಯ ನವದುರ್ಗೆಯರ ಅವತಾರ ಕುರಿತು ನೃತ್ಯ ಪ್ರದರ್ಶಿಸಿದರು. ಮಹಾರಾಣಿ ಮಹಿಳಾ ಕಾಲೇಜು ವತಿಯಿಂದ ಮಹಿಳಾ ಸಬಲೀಕರಣದ ಕುರಿತು ಅರಿವು ಮೂಡಿಸುವ ಅಮೋಘ ನೃತ್ಯ ಪ್ರದರ್ಶನವಾಯಿತು. ಜೆ.ಎಸ್.ಎಸ್ ವಿದ್ಯಾರ್ಥಿಗಳ ಕಲಾತಂಡವು ನಾಡಿನ ನೆಚ್ಚಿನ ಆನೆ ಅರ್ಜುನನನ್ನು ನೆನೆದು ಹೆಜ್ಜೆ ಹಾಕಿದರು.
ಇದನ್ನೂ ಓದಿ:ಅಂಬಾವಿಲಾಸ ಅರಮನೆಯ ದೀಪಾಲಂಕಾರದಲ್ಲಿ ಪೊಲೀಸ್ ಬ್ಯಾಂಡ್ ನಿನಾದ