ಮಂಗಳೂರು: ಮೋದಿ ಸ್ಕೀಮ್ನಲ್ಲಿ ಒಂದು ಲಕ್ಷ ರೂ. ಸಿಗುತ್ತದೆ ಎಂದು ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ನಂಬಿಸಿ, 50 ಸಾವಿರ ರೂ. ಮೌಲ್ಯದ ಚಿನ್ನದ ಬಳೆಯನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 21ರಂದು ಮಧ್ಯಾಹ್ನ ಲೀಲಾ ಎಂಬವರು ಮುಕ್ಕ ಸತ್ಯ ಧರ್ಮ ದೇವಸ್ಥಾನಕ್ಕೆ ಹೋಗಿ ವಾಪಸ್ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದೆ. ನೀಲಿ ಟಿ-ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದ ತುಳುವಿನಲ್ಲಿ ಮಾತನಾಡುತ್ತಿದ್ದ ಅಂದಾಜು 40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ತನ್ನನ್ನು ಪರಿಚಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಲಾಗಿದೆ.
'ನಾನು ನಿಮ್ಮ ಮಗಳ ಮಾವನ ಮಗನಾಗಿದ್ದು, ಮೋದಿಯ ಸ್ಕೀಮ್ನಲ್ಲಿ ನೀವು ಬ್ಯಾಂಕ್ನಲ್ಲಿ 6 ಸಾವಿರ ರೂಪಾಯಿಗಳನ್ನು ಕಟ್ಟಿದರೆ, ನಿಮಗೆ ಒಂದು ಲಕ್ಷ ರೂಪಾಯಿ ಸಿಗುತ್ತದೆ. ಈಗ ಮಧ್ಯಾಹ್ನದ ಒಳಗಡೆ ಕಟ್ಟಬೇಕು, ಇವತ್ತು ಕೊನೆಯ ದಿನ. ನೀವು 6 ಸಾವಿರ ರೂಪಾಯಿ ಕೊಡಿ ನಾನು ಬ್ಯಾಂಕ್ಗೆ ಕಟ್ಟಿ, ನಿಮಗೆ ಒಂದು ಲಕ್ಷ ರೂ. ತೆಗೆದು ಕೊಡುತ್ತೇನೆ' ಎಂದು ಪರಿಚಿತರಂತೆ ನಾಟಕವಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆಯ ಬಳಿ ನಗದು ಹಣವಿಲ್ಲದೇ ಇದ್ದುದರಿಂದ ಆರೋಪಿಯು ಅವರ ಚಿನ್ನದ ಕೈ ಬಳೆಯನ್ನು ಪಡೆದುಕೊಂಡು, ಈ ಬಳೆಯನ್ನು ಮುಕ್ಕದ ಫೈನಾನ್ಸ್ವೊಂದರಲ್ಲಿ ಅಡವು ಇರಿಸಿ, ಅದರಲ್ಲಿ 6 ಸಾವಿರ ರೂ. ನಿಮ್ಮ ಹೆಸರಿನಲ್ಲಿ ಬ್ಯಾಂಕಿನಲ್ಲಿ ಕಟ್ಟಿ, ಒಂದು ಲಕ್ಷ ರೂ. ಮತ್ತು ಫೈನಾನ್ಸ್ನಲ್ಲಿ ಅಡವು ಇರಿಸಿದ ಬಳೆಯನ್ನು ಬಿಡಿಸಿಕೊಂಡು ತಂದು ಕೊಡುತ್ತೇನೆ. ನೀವು ಮುಕ್ಕ ಕಾರ್ಪೋರೇಶನ್ ಬ್ಯಾಂಕಿನ ಬಳಿ ನಿಂತುಕೊಳ್ಳಿ. ನಾನು ಅದೇ ಬ್ಯಾಂಕಿನಲ್ಲಿ ಕೆಲಸದಲ್ಲಿ ಇರುವುದಾಗಿದೆ ಎಂದು ನಂಬಿಸಿದ್ದಾನೆ. ಆತನ ಮಾತನ್ನು ನಂಬಿ ಮಹಿಳೆ ಸುಮಾರು ಒಂದು ಪವನ್ ತೂಕವಿರುವ ಸುಮಾರು 50 ಸಾವಿರ ಬೆಲೆ ಬಾಳುವ ಚಿನ್ನದ ಬಳೆ ಕೊಟ್ಟಿದ್ದಾರೆ. ಬಳಿಕ ಮಹಿಳೆಗೆ ತಾನು ಮೋಸ ಹೋಗಿರುವುದು ತಿಳಿದು ಬಂದಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ ಯತ್ನ; ದರೋಡೆಕೋರರ ಕಾಲಿಗೆ ಗುಂಡೇಟು