ಹುಬ್ಬಳ್ಳಿ: ಮಗನಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ತಂದೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ನಡೆದಿದೆ. ನಾಗರಾಜ್ ಮೈಸೂರು (77) ಮಗನಿಂದ ಹತ್ಯೆಯಾದ ತಂದೆ. ಅಣ್ಣಪ್ಪ ಮೈಸೂರು ಕೊಲೆ ಮಾಡಿದ ಮಗ ಎಂದು ತಿಳಿದು ಬಂದಿದೆ.
ನ.19 ರಂದು ತಂದೆ ಮತ್ತು ಮಗನ ನಡುವೆ ಜಗಳ ವಿಕೋಪಕ್ಕೆ ತಿರುಗಿದೆ. ಮದ್ಯದ ಅಮಲಿನಲ್ಲಿ ಅಣ್ಣಪ್ಪ ತಂದೆ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ನಾಗರಾಜ್ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಾಗರಾಜ್ ಮೃತಪಟ್ಟಿದ್ದಾರೆ. ಆರೋಪಿ ಮಗ ತನ್ನ ಪತ್ನಿಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಮೃತನ ಪತ್ನಿ ರೇಣುಕಾ, ಮಗನ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೃತನ ಪತ್ನಿ ರೇಣುಕಾ ಪ್ರತಿಕ್ರಿಯಿಸಿ, "ಪುತ್ರ ಅಣ್ಣಪ್ಪ ಚಿಂದಿ ಆಯುವ ಕೆಲಸ ಮಾಡುತ್ತಿದ್ದ. ಬಂದ ಹಣದಿಂದ ಮದ್ಯ ಸೇವಿಸಿ ಬಂದು ನಿತ್ಯ ಮನೆಯಲ್ಲಿ ಜಗಳ ಮಾಡುತ್ತಿದ್ದ. ನನ್ನ ಪತಿ ಬುದ್ಧಿ ಮಾತು ಹೇಳಿದ್ದಕ್ಕೆ ಕೋಪಗೊಂಡು ಕೈಯಲ್ಲಿ ಗುದ್ದಿ ಹಲ್ಲೆ ಮಾಡಿದ್ದಾನೆ. ಮಗನ ಕೃತ್ಯಕ್ಕೆ ಸೊಸೆಯೂ ಸಹಕಾರ ನೀಡಿದ್ದಾಳೆ. ಈಗ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಮಗ ಮತ್ತು ಸೊಸೆ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
ಪ್ರಕರಣದ ಬಗ್ಗೆ ಪೊಲೀಸ್ ಆಯುಕ್ತರು ಹೇಳಿದ್ದಿಷ್ಟು: ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿ, "ಕ್ಷುಲ್ಲಕ ವಿಚಾರಕ್ಕೆ ಮಗ ಜಗಳ ತೆಗೆದು ತಂದೆಯ ಮೇಲೆ ಹಲ್ಲೆ ಮಾಡಿದ್ದ. ಗಾಯಗೊಂಡಿದ್ದ ನಾಗರಾಜ್ ಮೃತಪಟ್ಟಿದ್ದಾರೆ. ಹಲ್ಲೆ ಮಾಡಿದ್ದ ಮಗ ತಲೆಮರೆಸಿಕೊಂಡಿದ್ದಾನೆ. ಆರೋಪಿಯನ್ನು ಆದಷ್ಟು ಬೇಗ ಬಂಧಿಸುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಮಹಿಳಾ ದೌರ್ಜನ್ಯ ಪ್ರಕರಣ ಬೆಂಗಳೂರಿನಲ್ಲಿ ಅತೀ ಹೆಚ್ಚು: ಹಿಂಸೆಗೊಳಗಾದವರಲ್ಲಿ ಶೇ.50ರಷ್ಟು ವಿದ್ಯಾವಂತರು