ಮೈಸೂರು:ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಾದರೂ, ಜಂಬೂ ಸವಾರಿಗೆ ಮೆರುಗು ನೀಡುವ ದಸರಾ ದೀಪಾಲಂಕಾರ ನೋಡಲು ಲಕ್ಷಾಂತರ ಜನ ಮೈಸೂರಿಗೆ ಆಗಮಿಸುತ್ತಾರೆ. ಇಂತಹ ದಸರಾ ದೀಪಾಲಂಕಾರವನ್ನು ಆಕರ್ಷಣೆಯಾಗಿ ಮಾಡಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್) ಮೊದಲ ಬಾರಿಗೆ 1,500 ಡ್ರೋನ್ಗಳನ್ನು ಬಳಸಿ ಆಕಾಶದಲ್ಲಿ 4 ದಿನಗಳ ಕಾಲ ಡ್ರೋನ್ ಶೋ ನಡೆಸಲು ನಿರ್ಧರಿಸಿದೆ. ಈ ಬಗ್ಗೆ ಸೆಸ್ ವಿಡಿಯೋ ಬಿಡುಗಡೆ ಮಾಡಿದೆ.
ವಿವಿಧ ಪ್ರತಿಕೃತಿಗಳ ಬಿಂಬಗಳು ಈ ಶೋನಲ್ಲಿ ಮೂಡಿಬರಲಿದೆ. ಈ ಡ್ರೋನ್ ಶೋಗೆ LED ಬಲ್ಬ್ಗಳನ್ನು ಬಳಸಲಾಗುತ್ತದೆ. ಆಕಾಶದಲ್ಲಿ ಅದ್ಭುತ ಆಕೃತಿಗಳನ್ನು ಮೂಡಿಸಲು ಸೆಸ್ ಸಿದ್ಧತೆ ಮಾಡಿಕೊಂಡಿದೆ. ಅಕ್ಟೋಬರ್ 6 ಮತ್ತು 7 ಮತ್ತು 11 ಮತ್ತು 12ರಂದು ರಾತ್ರಿ 8 ಗಂಟೆಯಿಂದ 8.15ರವರೆಗೆ ಬನ್ನಿಮಂಟಪದ ಪಂಜಿನ ಕವಾಯತಿನಲ್ಲಿ ಈ ಡ್ರೋನ್ ಶೋ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ ಎಂದು ಸೆಸ್ ಪ್ರಕಟಣೆಯಲ್ಲಿ ತಿಳಿಸಿದೆ.