ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಹಗರಣ ಆರೋಪ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಕುರಿತು ತನಿಖೆಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಆರ್ಟಿಐ ಕಾರ್ಯಕರ್ತರಾದ ಟಿ. ಜೆ. ಅಬ್ರಹಾಂ, ಮೈಸೂರಿನ ಸ್ನೇಹಮಯಿ ಕೃಷ್ಣ ದೂರಿನ ಮೇರೆಗೆ ರಾಜ್ಯಪಾಲರು ಆರು ಪುಟಗಳ ಆದೇಶ ಹೊರಡಿಸಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17- ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023ರ ಸೆಕ್ಷನ್ 218ರ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆರೋಪ ತನಿಖೆಗೆ ಅನುಮತಿ ನೀಡಿರುವುದಾಗಿ ಆದೇಶಕ್ಕೆ ಸಹಿ ಹಾಕಲಾಗಿದೆ.
ಆದೇಶದಲ್ಲಿ ಏನಿದೆ?: ಟಿ ಜೆ ಅಬ್ರಹಾಂ ಜೊತೆಗೆ ಮತ್ತಿಬ್ಬರು ಅರ್ಜಿದಾರರಾದ ಪ್ರದೀಪ್ ಕುಮಾರ್ ಎಸ್ಪಿ ಮತ್ತು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಆರೋಪಗಳಿಗೆ ಸಂಬಂದಿಸಿದಂತೆ ಸಲ್ಲಿಕೆಯಾಗಿರುವ ದೂರುಗಳು, ಕಾನೂನು ತಜ್ಞರ ಅಭಿಪ್ರಾಯ ಮತ್ತು ಸಂಪುಟದ ನಿರ್ಣಯವನ್ನು ಪರಿಶೀಲಿಸಲಾಗಿದೆ. ಸಿಎಂ ವಿರುದ್ಧ ಎರಡು ಬಗೆಯ ಆರೋಪಗಳಿವೆ. ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳಿಗೆ ಪೂರಕ ದಾಖಲೆಗಳು ಇವೆ. ಈ ಹಿನ್ನೆಲೆ ಆರೋಪಗಳ ಕುರಿತ ತಟಸ್ಥ, ವಸ್ತು ನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ.
ಅರ್ಜಿಗಳ ಆಧಾರ ಮೇಲೆ ಜುಲೈ 26ರಂದು ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ವಿವರಣೆ ಕೇಳಲಾಗಿತ್ತು. ಆಗಸ್ಟ್ 1ರಂದು ಸಂಪುಟದ ನಿರ್ಣಯಗಳು ನನ್ನ ಕಚೇರಿಗೆ ತಲುಪಿದವು. ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಆಗಸ್ಟ್ 3ರಂದು ನನ್ನ ಕಚೇರಿ ತಲುಪಿತು.
ಮುಡಾದಲ್ಲಿನ ಅಕ್ರಮ ತನಿಖೆಗೆ ಸಮಿತಿ ರಚಿಸಲಾಗಿತ್ತು. ಬಳಿಕ ತನಿಖಾ ಆಯೋಗದ ಕಾಯ್ದೆ 1952ರ ಅಡಿಯಲ್ಲಿ ಉನ್ನತ ಮಟ್ಟದ ಏಕ ವ್ಯಕ್ತಿ ತನಿಖಾ ಸಮಿತಿ ರಚಿಸಲಾಯಿತು. ಆರೋಪ ಕೇಳಿ ಬಂದಿರುವ ವ್ಯಕ್ತಿಯೇ ತನಿಖೆ ಹೇಗಿರಬೇಕು ಎಂದು ನಿರ್ಧರಿಸುವುದು ಕಾನೂನು ಸಮ್ಮತವಲ್ಲ. ಈ ಹಿನ್ನೆಲೆ ಸಂಪುಟ ನಿರ್ಧಾರ ಕಾನೂನು ಬಾಹಿರಾಗಿದೆ.
ಸಿಎಂ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ಅವರು ಆಗಸ್ಟ್ 1ರಂದು ಸಂಪುಟ ಸಭೆ ಕರೆದು, ಶೋಕಾಸ್ ನೋಟಿಸ್ ಮಂಡಿಸಿ, ಚರ್ಚಿಸಿದ್ದಾರೆ. ವಿಚಾರಣೆಗೆ ಅನುಮತಿ ಕೋರಿರುವ ಅರ್ಜಿಗಳನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡುವ ನಿರ್ಣಯವನ್ನು ಸಂಪುಟ ಸಭೆ ನಡೆಸಲಾಗಿದೆ. ಸಿಎಂ ಸಲಹೆಯಂತೆ ರಚನೆಯಾದ ಸಂಪುಟ ಸಭೆಯಲ್ಲಿ ಸಿಎಂ ವಿರುದ್ಧ ದೂರುಗಳನ್ನು ತಿರಸ್ಕರಿಸುವ, ಸಲಹೆ ನೀಡುವ ನಿರ್ಣಯ ಮಾಡಲಾಗಿದೆ. ಈ ನಿರ್ಣಯವು ವಿಶ್ವಾಸಾರ್ಹವಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಮಧ್ಯಪ್ರದೇಶ ವಿಶೇಷ ಪೊಲೀಸ್ ಘಟಕ ಮತ್ತು ಮಧ್ಯಪ್ರದೇಶ ಸರ್ಕಾರದ ಮಧ್ಯೆದ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್ನ 2004ರಲ್ಲಿ ನೀಡಿರುವ ತೀರ್ಪು ಕೆಲವು ವಿಶೇಷ ಸಂದರ್ಭದಲ್ಲಿ ಸಂಪುಟದ ಸಲಹೆಯನ್ನು ಸ್ವೀಕರಿಸುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟದ್ದು ಎಂದು ಉಲ್ಲೇಖಿಸಲಾಗಿದೆ.
ಇಂತಹ ಪ್ರಕರಣಗಳಲ್ಲಿ ದಾಖಲೆ ಲಭ್ಯವಿದ್ದಾಗಲೂ ತನಿಖೆಗೆ ಅನುಮತಿ ನಿರಾಕರಿಸಿದರೆ ಇದರಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ತಟಸ್ಥ, ವಸ್ತುನಿಷ್ಠ ಮತ್ತು ಪಕ್ಷಾತೀತ ತನಿಖೆ ನಡೆಸುವ ಅಗತ್ಯತೆ ಇದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ