ಬೆಂಗಳೂರು:ರಾಜಕೀಯ ಅನಿಶ್ಚಿತತೆಯಲ್ಲಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಇಂದು ಮಹತ್ವದ ನಿರ್ಧಾರ ಪ್ರಕಟಿಸಲಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ಕೊಡಲಿದ್ದಾರಾ ಅಥವಾ ಕಳೆದ ಬಾರಿಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಾರಾ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.
ಬಿಜೆಪಿಯಿಂದ ಮಂಡ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಉತ್ಸಾಹದಲ್ಲಿದ್ದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ - ಜೆಡಿಎಸ್ ಮೈತ್ರಿಯಾಗಿದ್ದರಿಂದ ರಾಜಕೀಯ ಹಾದಿಯಲ್ಲಿ ಹೊಸ ಸವಾಲು ಎದುರಾಗಿದೆ. ಮಂಡ್ಯ ಜೆಡಿಎಸ್ಗೆ ಹಂಚಿಕೆಯಾಗಿ, ಕುಮಾರಸ್ವಾಮಿ ಅಭ್ಯರ್ಥಿ ಆದ ನಂತರ ಮುಂದೇನು ಮಾಡಬೇಕು ಎನ್ನುವ ಗೊಂದಲಕ್ಕೆ ಸುಮಲತಾ ಸಿಲುಕಿದ್ದಾರೆ.
ಈ ನಡುವೆ ಬಿಜೆಪಿ ಸೇರುವಂತೆ ಅಧಿಕೃತ ಆಹ್ವಾನ ಬಂದು ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಟಿಕೆಟ್ ಭರವಸೆ ನೀಡಿದರೂ ಒಪ್ಪದ ಸುಮಲತಾ, ಮಂಡ್ಯ ರಾಜಕಾರಣದಿಂದ ದೂರ ಉಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸುಮಲತಾ ನಿವಾಸಕ್ಕೆ ತೆರಳಿ ಬಿಜೆಪಿ ಹೈಕಮಾಂಡ್ ಸಂದೇಶವನ್ನು ತಿಳಿಸಿದ್ದರು. ಪರ್ಯಾಯ ಅವಕಾಶಗಳ ಕುರಿತು ಹೈಕಮಾಂಡ್ ಚಿಂತನೆ ಮಾಡಿರುವ ವಿಚಾರ ತಿಳಿಸಿ, ಬಿಜೆಪಿ ಸೇರಿ ಮೈತ್ರಿ ಅಭ್ಯರ್ಥಿ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದರು.
ಆದರೆ, ಯಾವುದೇ ಸ್ಪಷ್ಟ ಭರವಸೆ ನೀಡದ ಸುಮಲತಾ ಜೆಪಿನಗರ ನಿವಾಸದಲ್ಲಿ ಅಭಿಮಾನಿಗಳು, ಹಿತೈಷಿಗಳ ಸಭೆ ನಡೆಸಿ ಅಭಿಪ್ರಾಯ ಆಲಿಸಿದರು. ಎಲ್ಲರೂ ಪಕ್ಷೇತರವಾಗಿ ಸ್ಪರ್ಧೆ ಮಾಡಿ ನಿಮ್ಮ ಜೊತೆ ನಾವು ನಿಲ್ಲುತ್ತೇವೆ ಎನ್ನುವ ಅಭಯ ನೀಡಿದರು. ಅಭಿಮಾನಿಗಳ ಅಭಯಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ ಏಪ್ರಿಲ್ 3ರಂದು ಮಂಡ್ಯದಲ್ಲೇ ಕಾರ್ಯಕರ್ತರ ಸಮಾವೇಶ ನಡೆಸಿ ನಿರ್ಧಾರ ಪ್ರಕಟಿಸುದಾಗಿ ಘೋಷಿಸಿದ್ದರು.