ಬೆಂಗಳೂರು: ಇತ್ತೀಚೆಗೆ ಐಷಾರಾಮಿ ಕಾರು ಡಿಕ್ಕಿಯಾಗಿ 30 ವರ್ಷದ ಸಂಧ್ಯಾ ಎಂಬವರು ಸಾವನ್ನಪ್ಪಿದ ಘಟನಾ ಸ್ಥಳದ ಸಿಸಿಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ ತುಣುಕನ್ನು ಒಳಗೊಂಡ ಹಾರ್ಡ್ ಡಿಸ್ಕ್‌ನ್ನು ಜಪ್ತಿ ಮಾಡುವಂತೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗೆ ಹೈಕೋರ್ಟ್ ಸೂಚನೆ ನೀಡಿದೆ.
ಮೃತ ಸಂಧ್ಯಾ ಪತಿ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಎನ್.ಶಿವಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ. ಅಲ್ಲದೆ, 2024ರ ನವೆಂಬರ್ 2ರಂದು ಸಂಧ್ಯಾ ಮೃತಪಟ್ಟಿರುವ ಅಪಘಾತಕ್ಕೆ ಸಂಬಂಧಿಸಿದ ವಿಡಿಯೋ ತುಣುಕನ್ನು ಒಳಗೊಂಡ ಹಾರ್ಡ್ ಡಿಸ್ಕ್ ಅನ್ನು ಕೆಂಗೇರಿ ಸಂಚಾರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಪ್ತಿ ಮಾಡಬೇಕು ಎಂದು ಸೂಚನೆ ನೀಡಿರುವ ಕೋರ್ಟ್, ಬೆಂಗಳೂರು ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗದ ಡಿಸಿಪಿ, ಎಸಿಪಿ ಮತ್ತು ಕೆಂಗೇರಿ ಸಂಚಾರ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಪರ ವಕೀಲರ ವಾದವೇನು?: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಇಡೀ ಘಟನೆಗೆ ಸಂಬಂಧಿಸಿದ ವಿಡಿಯೋ ಸಮೀಪದಲ್ಲೇ ಇರುವ ಬಿಬಿಎಂಪಿ ಸಾರ್ವಜನಿಕ ಶೌಚಾಲಯದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಸಂಧ್ಯಾ ಅಪಘಾತದಲ್ಲಿ ಸಾವನ್ನಪ್ಪಲು ಚಾಲಕನ ನಿರ್ಲಕ್ಷ್ಯ ಕಾರಣ ಎಂಬುದಕ್ಕೆ ಸಾಕ್ಷ್ಯವಾಗಲಿದೆ. ಸಿಸಿಟಿವಿ ದೃಶ್ಯಾವಳಿ ತೆಗೆಸಲು ಅರ್ಜಿದಾರ ಶಿವಕುಮಾರ್ ಸಾಕಷ್ಟು ಪ್ರಯತ್ನ ಮಾಡಿದರೂ ಪೊಲೀಸರು ನೆರವಾಗಿಲ್ಲ. ಸರ್ವರ್ ಸಮಸ್ಯೆ, ಹಾರ್ಡ್‌ಡಿಸ್ಕ್‌ನಿಂದ ದೃಶ್ಯಾವಳಿ ಪಡೆಯಲು ತಾಂತ್ರಿಕ ಸಮಸ್ಯೆಯಾಗುತ್ತಿದೆ ಎಂದು ನೆಪ ಹೇಳುತ್ತಿದ್ದಾರೆ. ಒಂದು ಕ್ಯಾಮರಾದಲ್ಲಿ ಹೆಚ್‌ಡಿಆರ್ ಇಲ್ಲ, ಇನ್ನೊಂದು ಕ್ಯಾಮರಾದ ಡಿವಿಆರ್ ಘಟನೆಯ ವಿಡಿಯೋ ಕೂಡ ಸೆರೆ ಹಿಡಿದಿಲ್ಲ ಎನ್ನುತ್ತಿದ್ದಾರೆ'' ಎಂದು ಆಕ್ಷೇಪಿಸಿದರು.
''ಅಲ್ಲದೆ, ಪ್ರಕರಣದಲ್ಲಿ ಆರೋಪಿಯಾಗಿರುವ ಧನುಷ್ ಪ್ರಭಾವಿಯಾಗಿದ್ದು, ಅವರ ಕುಟುಂಬಸ್ಥರು ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಹೀಗಾಗಿ, ಪ್ರಕರಣವನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ. ಹೀಗಾಗಿ, ಘಟನೆಯ ಹಾರ್ಡ್ ಡಿಸ್ಕ್ ಜಪ್ತಿ ಮಾಡಲು ತನಿಖಾಧಿಕಾರಿಗೆ ನಿರ್ದೇಶಿಸಬೇಕು'' ಎಂದು ಅರ್ಜಿದಾರರ ಪರ ವಕೀಲರು ಕೋರಿದ್ದರು.
ಪ್ರಕರಣದ ಹಿನ್ನೆಲೆ: 2024ರ ನವೆಂಬರ್ 2ರಂದು ಮೈಸೂರು ಕಡೆ ತೆರಳುತ್ತಿದ್ದ ಕೆ.ಪಿ.ಧನುಷ್ ಎಂಬವರು ಚಲಾಯಿಸುತ್ತಿದ್ದ ಕಾರು ಕೆಂಗೇರಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಪಾದಚಾರಿ 30 ವರ್ಷದ ಎ.ಎಸ್.ಸಂಧ್ಯಾ ಅವರಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಿಂದ ತೀವ್ರ ಗಾಯಗೊಂಡಿದ್ದ ಸಂಧ್ಯಾ ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಧನುಷ್ ಪಾನಮತ್ತನಾಗಿದ್ದು, ಘಟನೆಯಲ್ಲಿ ದ್ವಿಚಕ್ರ ವಾಹನ ಚಾಲಕ ಸಯದ್ ಅರ್ಬಾಜ್ ಸಹ ಗಾಯಗೊಂಡಿದ್ದಾರೆ ಎಂದು 26 ವರ್ಷದ ಪುನೀತ್ ಎಂಬವರು ದೂರು ನೀಡಿದ್ದರು.
ಇದನ್ನೂ ಓದಿ: ರಾಮನಗರ: ಕಾರು - ಲಾರಿ ಮಧ್ಯೆ ಅಪಘಾತ; ಮೂವರು ಸ್ಥಳದಲ್ಲೇ ಸಾವು