ಕರ್ನಾಟಕ

karnataka

ETV Bharat / state

Watch.. ಮೇ 31ರಂದು ವಿಚಾರಣೆಗೆ ಹಾಜರಾಗುತ್ತೇನೆ: ವಿದೇಶದಿಂದ ವಿಡಿಯೋ ಮೂಲಕ ಪ್ರಜ್ವಲ್ ರೇವಣ್ಣ ಹೇಳಿಕೆ - MP Prajwal Revanna

ಸಂಸದ ಪ್ರಜ್ವಲ್ ರೇವಣ್ಣ ಅವರು ಮೇ 31 ರಂದು ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

mp-prajwal-revanna
ಪ್ರಜ್ವಲ್ ರೇವಣ್ಣ (ETV Bharat)

By ETV Bharat Karnataka Team

Published : May 27, 2024, 4:45 PM IST

Updated : May 27, 2024, 5:36 PM IST

ಸಂಸದ ಪ್ರಜ್ವಲ್ ರೇವಣ್ಣ (ETV Bharat)

ಬೆಂಗಳೂರು : ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಮೇ 31ರಂದು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ವಿದೇಶದಿಂದಲೇ ವಿಡಿಯೋ ಬಿಡುಗಡೆಗೊಳಿಸಿರುವ ಪ್ರಜ್ವಲ್, ಇಷ್ಟು ದಿನಗಳ ಕಾಲ ವಿದೇಶದಲ್ಲಿ ಎಲ್ಲಿದ್ದೇನೆ ಎಂಬ ಮಾಹಿತಿ ನೀಡದಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ.

ಏಪ್ರಿಲ್ 26ರಂದು ಚುನಾವಣೆ ನಡೆದ ಸಂದರ್ಭದಲ್ಲಿ ನನ್ನ ವಿರುದ್ದ ಯಾವುದೇ ಪ್ರಕರಣಗಳಿರಲಿಲ್ಲ. ಎಸ್ಐಟಿ ಸಹ ರಚನೆಯಾಗಿರಲಿಲ್ಲ. 26ನೇ ತಾರೀಖಿನಂದು ನಾನು ವಿದೇಶಕ್ಕೆ ತೆರಳುವುದು ಮೊದಲೇ ನಿಗದಿಯಾಗಿತ್ತು. ಆದ್ದರಿಂದ ನಾನು ಹೋದೆ. ಅದಾದ 2-3 ದಿನಗಳ ಬಳಿಕ ನನಗೆ ಸುದ್ದಿಮಾಧ್ಯಮಗಳಲ್ಲಿ ನೋಡಿದಾಗ ವಿಚಾರ ಗೊತ್ತಾಯಿತು ಮತ್ತು ಎಸ್ಐಟಿಯಿಂದ ನೋಟಿಸ್ ಕೂಡಾ ನೀಡುವ ಕೆಲಸ ಆಯಿತು.

ನೋಟಿಸ್​ಗೂ ಸಹ ನಾನು 7 ದಿನಗಳ ಕಾಲಾವಕಾಶ ನೀಡುವಂತೆ ನನ್ನ ಎಕ್ಸ್ ಖಾತೆಯ ಮೂಲಕ ಹಾಗೂ ನನ್ನ ವಕೀಲರ ಮೂಲಕ ಮನವಿ ಮಾಡಿದ್ದೆ‌. ನಾನು ಕಾಲಾವಕಾಶ ಕೇಳಿದ ಮಾರನೇ ದಿನದಿಂದಲೇ ರಾಹುಲ್ ಗಾಂಧಿ ಸೇರಿದಂತೆ ಕೆಲ ಕಾಂಗ್ರೆಸ್‌ನ ನಾಯಕರು ಈ ವಿಚಾರವನ್ನ ವೇದಿಕೆಗಳಲ್ಲಿ ಮಾತನಾಡುವ ಮೂಲಕ ಪ್ರಚಾರಕ್ಕೆ ಬಳಸಿಕೊಂಡರು. ರಾಜಕೀಯ ಪಿತೂರಿ ಮಾಡುವ ಕೆಲಸ ಮಾಡಿದರು. ಇದೆಲ್ಲವನ್ನೂ ನೋಡಿ ನಾನು ಖಿನ್ನನಾಗಿ, ಯಾರ ಸಂಪರ್ಕಕ್ಕೂ ಸಿಗದೇ ಉಳಿದೆ‌. ಆದ್ದರಿಂದ ನಾನು ಎಲ್ಲರ ಕ್ಷಮೆ ಕೇಳುತ್ತೇನೆ‌ ಎಂದು ಪ್ರಜ್ವಲ್ ರೇವಣ್ಣ ತಾವು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ವಿವರಿಸಿದ್ದಾರೆ‌.

ಅಲ್ಲದೇ ಹಾಸನದಲ್ಲಿಯೂ ಸಹ ಕೆಲವು ಶಕ್ತಿಗಳು ಒಟ್ಟಾಗಿ ಸೇರಿ ನನ್ನ ವಿರುದ್ಧ ಪಿತೂರಿ ಮಾಡಿದವು. ರಾಜಕೀಯವಾಗಿ ನನ್ನನ್ನ ಕುಗ್ಗಿಸಲು ಈ ಪ್ರಕರಣದಲ್ಲಿ ಎಲ್ಲರೂ ಸಹ ಒಟ್ಟಾಗಿ ಕೆಲಸ ಮಾಡಿದರು. ಇದೆಲ್ಲವನ್ನ ನೋಡಿ ಆಘಾತಕ್ಕೊಳಗಾಗಿ ನಾನೇ ಸ್ವಲ್ಪ ದೂರ ಉಳಿದೆ. ಯಾರೂ ಸಹ ತಪ್ಪು ತಿಳಿದುಕೊಳ್ಳುವುದು ಬೇಡ. ನಾನೇ ಮೇ 31ರಂದು ಖುದ್ದಾಗಿ ಎಸ್ಐಟಿ ಮುಂದೆ ಹಾಜರಾಗುವ ಮೂಲಕ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇನೆ.

ನ್ಯಾಯಾಲಯದ ಮೇಲೆ ನನಗೆ ನಂಬಿಕೆಯಿದೆ. ಈ ಸುಳ್ಳು ಪ್ರಕರಣದಿಂದ ಹೊರಬರುವ ಕೆಲಸವನ್ನ ನಾನು ನ್ಯಾಯಾಲಯದ ಮೂಲಕವೇ ಮಾಡುತ್ತೇನೆ. ದೇವರ, ಜನರ ಆಶೀರ್ವಾದ ಹಾಗೂ ನನ್ನ ಕುಟುಂಬದ ಆಶೀರ್ವಾದ ನನ್ನ ಮೇಲಿರಲಿ‌. ಎಸ್ಐಟಿ ತನಿಖೆಗೆ ಹಾಜರಾಗುವ ಮೂಲಕ ಎಲ್ಲದಕ್ಕೂ ತೆರ ಎಳೆಯುವ ಕೆಲಸ ಮಾಡಲಿದ್ದೇನೆ ಎಂದು ಪ್ರಜ್ವಲ್ ರೇವಣ್ಣ ತಮ್ಮ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ :ಪ್ರಜ್ವಲ್ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿ ಪತ್ರಕ್ಕೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ: ಸಚಿವ ಪರಮೇಶ್ವರ್ - PRAJWAL REVANNA CASE

Last Updated : May 27, 2024, 5:36 PM IST

ABOUT THE AUTHOR

...view details