ಬೆಳಗಾವಿ :ಹಲವು ಚಲನಚಿತ್ರಗಳ ಚಿತ್ರೀಕರಣಕ್ಕೆ ಸಾಕ್ಷಿಯಾಗಿದ್ದ ಬೆಳಗಾವಿ ಈ ಹಿಂದೆ 40 ಚಲನಚಿತ್ರ ಮಂದಿರಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿತ್ತು. ಬಹುಭಾಷಾ ಸಂಸ್ಕೃತಿ ಇರುವ ಗಡಿನಾಡು ಕನ್ನಡ ಮಾತ್ರವಲ್ಲದೆ, ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಅವು ತೆರೆಮರೆಗೆ ಸರಿಯುತ್ತಿವೆ. ಚಾಲ್ತಿಯಲ್ಲಿರುವ ಚಿತ್ರಮಂದಿರಗಳಿಗೂ ಪ್ರೇಕ್ಷಕರ ಅಭಾವ ಕಾಡುತ್ತಿದೆ. ಹಾಗಾದರೆ ಇತ್ತೀಚಿನ ವರ್ಷಗಳಲ್ಲಿ ಪ್ರೇಕ್ಷಕರಿಲ್ಲದೇ ಎಷ್ಟು ಚಿತ್ರಮಂದಿರಗಳು ಮುಚ್ಚಿವೆ? ಅವು ಬಾಗಿಲು ಹಾಕಲು ಕಾರಣಗಳೇನು ಎನ್ನುವುದರ ಕುರಿತ ಈಟಿವಿ ಭಾರತದ ವಿಶೇಷ ಸ್ಟೋರಿ ಇಲ್ಲಿದೆ.
ಟಿಕೆಟ್ ಖರೀದಿಗೆ ಕಾಣುತ್ತಿಲ್ಲ ಪ್ರೇಕ್ಷಕರ ಕ್ಯೂ; ಉತ್ತರ ಕರ್ನಾಟಕದಲ್ಲಿ ಚಿತ್ರಮಂದಿರಗಳ ವಿಚಾರಕ್ಕೆ ಬಂದರೆ ಮುನ್ನೆಲೆಗೆ ಬರುವುದೇ ಬೆಳಗಾವಿ ಮಹಾನಗರ. ಇಲ್ಲಿನ ಸಿನಿಮಾ ಥಿಯೇಟರ್ಗಳಲ್ಲಿ ಜನ ತಮ್ಮ ನೆಚ್ಚಿನ ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದರು. ಸೂಪರ್ ಹಿಟ್ ಮತ್ತು ನೆಚ್ಚಿನ ನಟರ ಚಿತ್ರಗಳು ಬಿಡುಗಡೆಯಾದಾಗ, ಹಿಂದಿನ ದಿನ ರಾತ್ರಿಯೇ ಬಂದು ಚಿತ್ರಮಂದಿರಗಳನ್ನು ಅಲಂಕರಿಸುತ್ತಿದ್ದರು. ಸಿನಿಮಾ ಟಿಕೆಟ್ಗೆ ದೊಡ್ಡ ಕ್ಯೂ ಇರುತ್ತಿತ್ತು. ಚಿತ್ರಮಂದಿರಗಳ ಜತೆಗೆ ಸಿನಿರಸಿಕರು ಅವಿನಾಭಾವ ಸಂಬಂಧ ಹೊಂದಿದ್ದರು. ಸ್ನೇಹಿತರು, ಕುಟುಂಬ ಸಮೇತರಾಗಿ, ಪ್ರೀತಿ ಪಾತ್ರರ ಜೊತೆಗೆ ಟಾಕೀಸ್ಗಳಲ್ಲಿ ಕಳೆದ ಆ ಕ್ಷಣಗಳು ಈಗ ಇತಿಹಾಸ.
ಆ ದಿನ, ಸಿನಿಮಾ ಕ್ಷಣಗಳು ನೆನಪು ಮಾತ್ರ; ತಾವು ಸಿನಿಮಾ ವೀಕ್ಷಿಸಿದ್ದ ಅನೇಕ ಟಾಕೀಸ್ಗಳು ಬಂದ್ ಆಗಿರುವುದನ್ನು ನೋಡಿದ ಜನರಿಗೆ ಒಂದು ಕ್ಷಣ ತಮ್ಮ ಹಳೆಯ ನೆನಪುಗಳು ಸ್ಮೃತಿ ಪಟಲದ ಮೇಲೆ ಬಂದು ಹೋಗದೇ ಇರದು. ಅಯ್ಯೋ ನಾವು ಸಂಪತ್ತಿಗೆ ಸವಾಲು, ಬಂಗಾರದ ಮನುಷ್ಯ, ಜೋಗಿ, ಯಜಮಾನ, ಅಣ್ಣ-ತಂಗಿ ಸಿನಿಮಾ ನೋಡಿದ್ದು ಇಲ್ಲೇ ಅಲ್ಲವೇ ಎಂದು ನೆನಪಿಸಿಕೊಳ್ಳುತ್ತಾರೆ.
ಹೌದು, ಗಡಿನಾಡು ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಈ ಹಿಂದೆ 40 ಚಿತ್ರಮಂದಿರಗಳು ಇದ್ದವು. ಸದಭಿರುಚಿ ಚಿತ್ರಗಳ ಕೊರತೆಯೋ..? ಮೊಬೈಲ್-ಡಿಜಿಟಲ್ ಕ್ರಾಂತಿಯೋ..? ಚಿತ್ರಮಂದಿರಗಳತ್ತ ಬರುವ ಸಿನಿ ಪ್ರೇಮಿಗಳ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಆರ್ಥಿಕ ನಷ್ಟವಾಗಿ ಒಂದೊಂದೇ ಟಾಕೀಸ್ಗಳನ್ನು ಮಾಲೀಕರು ಬಂದ್ ಮಾಡಿದ್ದಾರೆ. 40 ಟಾಕೀಸ್ಗಳ ಪೈಕಿ 16 ಮಾತ್ರ ಪ್ರೇಕ್ಷಕರ ಮನ ತಣಿಸುತ್ತಿವೆ.
ಬೆಳಗಾವಿ ನಗರದಲ್ಲಿ ಸಂತೋಷ, ನಿರ್ಮಲ್, ಚಿತ್ರಾ, ಪ್ರಕಾಶ, ಗ್ಲೋಬ್, ಸ್ವರೂಪ್ ಟಾಕೀಸ್ಗಳು ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿವೆ. ಇವು ಸಿಂಗಲ್ ಸ್ಕ್ರೀನ್, ನ್ಯೂಕ್ಲಿಯಸ್ ಮಾಲ್(3 ಸ್ಕ್ರೀನ್), ಐನಾಕ್ಸ್(2ಸ್ಕ್ರೀನ್) ಕೂಡ ಚಾಲು ಇವೆ. ಅದೇ ರೀತಿ ಬೈಲಹೊಂಗಲ ಪಟ್ಟಣದಲ್ಲಿ 2, ರಾಯಬಾಗ-1, ನಿಪ್ಪಾಣಿ-1(ಮಲ್ಟಿಪ್ಲೆಕ್ಸ್), ಗೋಕಾಕ್-1, ಹಾರೂಗೇರಿ-1, ಅಂಕಲಿ-1 ಚಿತ್ರಮಂದಿರಗಳು ಮಾತ್ರ ಸುಸ್ಥಿತಿಯಲ್ಲಿವೆ.