ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ ಫ್ರೀಡಂ ಪಾರ್ಕ್ ಸಮೀಪ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಕಾರ್ಯಾಚರಣೆ ಶುಕ್ರವಾರದಿಂದ ಕಾರ್ಯಾರಂಭಗೊಂಡಿದೆ. ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಮೂಲಕ ಬೆಂಗಳೂರು ಹೊಸ ಮೈಲಿಗಲ್ಲು ಸಾಧಿಸಿದೆ. ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಹೊಸ ಪ್ರಯೋಗಕ್ಕೆ ಗುತ್ತಿಗೆದಾರರು ಕೈ ಹಾಕಿದ್ದಾರೆ.
ಈ ಕುರಿತು ಈಟಿವಿ ಭಾರತ್ ಜೊತೆಗೆ ವಿಪ್ರೋ ಇಂಜಿನಿಯರ್ ವಿನಯ್ ಕುಮಾರ್ ಮಾತನಾಡಿ, ಇಲ್ಲಿ ಮೊದಲ ಬಾರಿಗೆ ಪಾರ್ಕಿಂಗ್ ಮಾಡಲು ಬಂದಿದ್ದೇನೆ. ಹೊಸ ಟೆಕ್ನಾಲಜಿಯ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ. ನೋಡುವುದಕ್ಕೆ ತುಂಬಾ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಫಾಸ್ಟ್ ಟ್ಯಾಗ್ ವ್ಯವಸ್ಥೆ ಕೂಡ ಕಲ್ಪಿಸಿರುವುದು ಉತ್ತಮವಾಗಿದೆ. ಇದೇ ರೀತಿಯ ವ್ಯವಸ್ಥೆ ಮುಂದುವರೆಯಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
ಈ ಹೈಟೆಕ್ ವ್ಯವಸ್ಥೆ ಉತ್ತಮವಾಗಿದೆ; ಈಗ ಟೋಲ್ಗಳಲ್ಲಿ ನಾವು ಫಾಸ್ಟ್ಟ್ಯಾಗ್ ಮೂಲಕ ಹಣ ಪಾವತಿಸಿ ಉತ್ತಮ ಗುಣಮಟ್ಟದ ಅಗಲವಾದ ರಸ್ತೆಯಲ್ಲಿ ಸಂಚರಿಸುತ್ತಿದ್ದೇವೆ. ಅಲ್ಲಿನ ನಿರ್ವಹಣೆ ಉತ್ತಮ ಆಗಿರುವುದರಿಂದ ಕಾರು ಉತ್ತಮ ಮೈಲೇಜ್ ನೀಡುವುದರೊಂದಿಗೆ ಆರಾಮದಾಯಕ ಪ್ರಯಾಣ ಮಾಡುತ್ತಿದ್ದೇವೆ. ಈ ಪಾರ್ಕಿಂಗ್ ವ್ಯವಸ್ಥೆ ಕೂಡ ಅದೇ ರೀತಿ ಇದ್ದು, ಅದೇ ಮಾದರಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ. ಮಲ್ಟಿ ಲೆವೆಲ್ ಪಾರ್ಕಿಂಗ್ ಮುಖ್ಯ ದ್ವಾರದಲ್ಲಿ ಪಾರ್ಕಿಂಗ್ ಸಂಖ್ಯೆ ಎಷ್ಟಿದೆ ಎನ್ನುವುದನ್ನು ತೋರಿಸುವ ವ್ಯವಸ್ಥೆ ಮಾಡಬೇಕು. ಈಗಲೇ ಎಲ್ಲದನ್ನೂ ಹೇಳುವುದು ತಪ್ಪಾಗುತ್ತದೆ. ಒಟ್ಟಿನಲ್ಲಿ ಸದ್ಯದ ವ್ಯವಸ್ಥೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.