ಹಾವೇರಿ: ಬೈಕ್ ಕೊಡಿಸದ ಕಾರಣಕ್ಕೆ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ನೊಂದು ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ನಡೆದಿದೆ. ಮೃತರನ್ನು 18 ವರ್ಷದ ಧನರಾಜ ನಾಯಕ ಹಾಗೂ ಈತನ ತಾಯಿ 43 ವರ್ಷದ ಭಾಗ್ಯಮ್ಮ ನಾಯಕ ಎಂದು ಗುರುತಿಸಲಾಗಿದೆ.
ಕರೂರ ಗ್ರಾಮದ ಧನರಾಜ ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ. ತನಗೆ ಬೈಕ್ ತೆಗೆದುಕೊಳ್ಳಲು ಹಣಬೇಕೆಂದು ಹಠ ಮಾಡುತ್ತಿದ್ದ. ಇದೇ ವಿಚಾರವಾಗಿ ಇಂದು ಬೆಳಗ್ಗೆ ತಂದೆ- ತಾಯಿ ಬಳಿ ಜಗಳ ತೆಗೆದಿದ್ದ. ಕೂಲಿ ಮಾಡಿಕೊಂಡಿರುವ ತಂದೆ ಸುರೇಶ ಆಯ್ತು ಹೇಗಾದರೂ ಮಾಡಿ ಕೊಡಿಸುತ್ತೇನೆ ಎಂದು ಹೇಳಿ ಕೆಲಸಕ್ಕೆ ಹೋಗಿದ್ದರು. ನಂತರ ತಾಯಿಯೂ ಮಗನಿಗೆ ಬುದ್ಧಿಮಾತು ಹೇಳಿದ್ದರು ಎಂದು ತಿಳಿದು ಬಂದಿದೆ.
ಆದರೆ, ತಾಯಿ ಪಕ್ಕದ ಮನೆಗೆ ಹೋಗಿದ್ದಾಗ ಧನರಾಜ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿ ಮನೆಗೆ ಬರುತ್ತಿದ್ದಂತೆ ಮಗನ ಸ್ಥಿತಿ ಕಂಡು ದಂಗಾಗಿದ್ದಾರೆ. ಇದರಿಂದ ನೊಂದು ಕರೂರ ರೈಲು ನಿಲ್ದಾಣದ ಬಳಿ ರೈಲು ಹಳಿಗೆ ಬಿದ್ದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಎರಡು ವರ್ಷದ ಹಿಂದೆ ಸುರೇಶ ಅವರ 14 ವರ್ಷದ ಪುತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದೀಗ ಪತ್ನಿ, ಪುತ್ರನನ್ನು ಕಳೆದುಕೊಂಡು ದುಃಖ ಮಡುವಿನಲ್ಲಿ ಮುಳುಗಿದ್ದಾರೆ. ತಾಯಿ, ಮಗನ ಸಾವಿನ ವಿಷಯ ತಿಳಿದ ಕುಮಾರಪಟ್ಟಣಂ ಪೊಲೀಸರು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಗರ್ಭಿಣಿ ಅನುಮಾನಾಸ್ಪದ ಸಾವು, ಪತಿ ವಿರುದ್ಧ ದೂರ ದಾಖಲು