ಚಾಮರಾಜನಗರ: ಬಟ್ಟೆ ಒಗೆಯುತ್ತಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹನೂರು ತಾಲೂಕಿನ ಗೋಪಿನಾಥಂ ಜಲಾಶಯದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಗೋಪಿನಾಥಂ ಸಮೀಪದ ಪುದೂರು ಗ್ರಾಮದ ನಿವಾಸಿಗಳಾದ ಮೀನಾ (34), ಪವಿತ್ರಾ (14) ಹಾಗು ಕೀರ್ತಿ (11) ಮೃತರೆಂದು ತಿಳಿದುಬಂದಿದೆ.
ಮೀನಾ ಅವರು ತಮ್ಮ ಮಕ್ಕಳೊಂದಿಗೆ ಶುಕ್ರವಾರ ಮಧ್ಯಾಹ್ನ ಗೋಪಿನಾಥಂ ಜಲಾಶಯಕ್ಕೆ ಬಟ್ಟೆ ತೊಳೆಯಲು ಹೋಗಿದ್ದರು. ಬಟ್ಟೆ ತೊಳೆದ ನಂತರ ಬಟ್ಟೆಯನ್ನು ಹಿಂಡಲು ಹೋದ ಮೀನಾ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ತಕ್ಷಣ ಇಬ್ಬರು ಹೆಣ್ಣು ಮಕ್ಕಳು ತಾಯಿಯನ್ನು ರಕ್ಷಿಸಲು ಹೋಗಿ ನೀರಿನಲ್ಲಿ ಮುಳುಗಿದ್ದಾರೆ. ಸ್ಥಳದಲ್ಲಿದ್ದ ಮಗ ಸುರೇಂದ್ರ ತಂದೆಗೆ ವಿಷಯ ತಿಳಿಸಿ ಕರೆದುಕೊಂಡು ಬರುವಷ್ಟರಲ್ಲಿ ಮೂವರೂ ಅಸುನೀಗಿದ್ದಾರೆ.