ಹಾವೇರಿ: ನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 10 ಕೆ.ಜಿ ಗಾಂಜಾ ವಶಪಡಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾವೇರಿ ರೈಲು ನಿಲ್ದಾಣದ ಬಳಿ ಇರುವ ಓವರ್ ಬ್ರಿಡ್ಜ್ನಲ್ಲಿ ಅಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿದ್ದಾಗ ನಾಲ್ವರು ಆರೋಪಿಗಳು ಪೊಲೀಸರಿಗೆ ಸೆರೆಸಿಕ್ಕಿದ್ದಾರೆ. ಬಂಧಿತರನ್ನು ದಿಳ್ಳೆಪ್ಪ ಮಲ್ಲಪ್ಪ ಅಳಲಗೇರಿ, ಫಾರೂಕ್ ಅಹ್ಮದ್ ಕುಂಚೂರು, ಇಸ್ಮಾಯಿಲ್ ನದಾಫ್ ಮತ್ತು ಸಾಹಿಲ್ ಕರ್ಜಗಿ ಎಂದು ಗುರುತಿಸಲಾಗಿದೆ.
ಆರೋಪಿಗಳು ಒಡಿಶಾ ರಾಜ್ಯದಲ್ಲಿ ಕಡಿಮೆ ಬೆಲೆಗೆ ಸಿಗುವ ಗಾಂಜಾದ ಹೂವು, ಮೊಗ್ಗು, ಬೀಜ ಮಿಶ್ರಿತ ಗಂಟು ಗಂಟಾದ ಒಣಗಿದ ಘಾಟು ವಾಸನೆಯುಳ್ಳ ಗಾಂಜಾ ಸಾಗಿಸುತ್ತಿದ್ದರು. ಅಲ್ಲಿಂದ ಕೆಜಿಗಟ್ಟಲೆ ಗಾಂಜಾ ತಂದು ನಂತರ ಅದನ್ನು 10 ಗ್ರಾಂ ಸೇರಿದಂತೆ ವಿವಿಧ ಗ್ರಾಂ ಲೆಕ್ಕದಲ್ಲಿ ಪ್ಯಾಕೆಟ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ವಶಕ್ಕೆ ಪಡೆದ ಗಾಂಜಾ ಸುಮಾರು 9,900 ಗ್ರಾಂ ಇದ್ದು, ಇದರ ಬೆಲೆ 7.91 ಲಕ್ಷ ರೂಪಾಯಿ ಆಗಿದೆ. ಆರೋಪಿಗಳು ಬಳಸುತ್ತಿದ್ದ ನಾಲ್ಕು ಮೊಬೈಲ್‌ಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.