ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಪದಗ್ರಹಣದ ಹಿನ್ನೆಲೆಯಲ್ಲಿ ನಡೆದ ವಿಜಯೋತ್ಸವದ ಬಳಿಕ 20-25 ಮಂದಿಯ ತಂಡವೊಂದು ಇಬ್ಬರಿಗೆ ಭಾನುವಾರ ರಾತ್ರಿ ಚೂರಿ ಇರಿದ ಘಟನೆ ನಗರದ ಮುಡಿಪು ಸಮೀಪದ ಬೋಳಿಯಾರುನಲ್ಲಿ ನಡೆದಿದೆ. ಇನ್ನೋಳಿ ನಿವಾಸಿಗಳಾದ ಹರೀಶ್ (41), ನಂದಕುಮಾರ್ (24) ಚೂರಿ ಇರಿತಕ್ಕೊಳಗಾದವರು. ಇನ್ನೋಳಿ ನಿವಾಸಿ ಕೃಷ್ಣ ಕುಮಾರ್ ಹಲ್ಲೆಗೊಳಗಾಗಿದ್ದಾರೆ.
ಭಾನುವಾರ ಸಂಜೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಬೋಳಿಯಾರುನಲ್ಲಿ ವಿಜಯೋತ್ಸವ ನಡೆದಿತ್ತು. ಬಳಿಕ ತೆರಳುತ್ತಿದ್ದ ವೇಳೆ ಮೂವರು ಬಿಜೆಪಿ ಕಾರ್ಯಕರ್ತರು ಕೆಲ ಘೋಷಣೆಗಳನ್ನು ಕೂಗಿದ್ದರು. ನಂತರ ಆಕ್ರೋಶಿತ ಯುವಕರ ಗುಂಪೊಂದು ಕೆಲ ಬೈಕ್‌ಗಳಲ್ಲಿ ಅವರನ್ನು ಹಿಂಬಾಲಿಸಿಕೊಂಡು ಹೋಗಿದೆ. ಬಾರ್ವೊಂದರ ಬಳಿ ಯುವಕರು ನಿಂತಿದ್ದ ವೇಳೆ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕರ ಗುಂಪು ಮೂವರನ್ನು ಥಳಿಸಿ, ಇಬ್ಬರಿಗೆ ಚೂರಿಯಿಂದ ಇರಿದಿದೆ. ಇವರಲ್ಲಿ ಒಬ್ಬರು ಅಪಾಯದಿಂದ ಪಾರಾಗಿದ್ದು, ಮತ್ತೊಬ್ಬರಿಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.