ಕರ್ನಾಟಕ

karnataka

ETV Bharat / state

ಚುನಾವಣಾ ಬಾಂಡ್‌ನಿಂದ ಮೋದಿ ಮುಖವಾಡ ಕಳಚಿ ಬಿದ್ದಿದೆ: ಎಂ.ಬಿ.ಪಾಟೀಲ್

ಚುನಾವಣಾ ಬಾಂಡ್​ ವಿಷಯದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವ ಎಂ.ಬಿ ಪಾಟೀಲ್,​ ಕಾಂಗ್ರೆಸ್​ಗೆ ಬಂದಿರುವ ಹಣವನ್ನು ಸಮರ್ಥಿಸಿಕೊಂಡಿದ್ದಾರೆ.

Minister MB Patil
ಸಚಿವ ಎಂ.ಬಿ.ಪಾಟೀಲ್

By ETV Bharat Karnataka Team

Published : Mar 18, 2024, 2:20 PM IST

ಬೆಂಗಳೂರು: "ಚುನಾವಣಾ ಬಾಂಡ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೆಗೆದುಕೊಂಡ ನಿರ್ಣಯದಿಂದ ಮೋದಿ ಅವರ ನೈತಿಕತೆಯ ಮುಖವಾಡ ಕಳಚಿ ಬಿದ್ದಿದೆ" ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದರು.

"ಮೋದಿಯವರು ನಾನೂ ತಿನ್ನುವುದಿಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ ಎಂದು ಹೇಳಿಕೊಳ್ಳುತ್ತಾ ಹುಸಿ ವರ್ಚಸ್ಸು ಸೃಷ್ಟಿಸಿಕೊಂಡಿದ್ದರು. ಆ ಹುಸಿ ವರ್ಚಸ್ಸಿಗೆ ಈಗ ಸರಿಯಾದ ಹೊಡೆತ ಬಿದ್ದಿದೆ. ಹೆಚ್ಚಿನ ಸಂದರ್ಭಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಳಿಗೆ ಒಳಗಾದ ನಂತರ ಅಥವಾ ಗುತ್ತಿಗೆಗಳನ್ನು ಪಡೆದ ನಂತರ ಬಿಜೆಪಿ ಹೆಸರಲ್ಲಿ ಚುನಾವಣಾ ಬಾಂಡ್ ತೆಗೆದುಕೊಂಡಿರುವುದು ಬಹಿರಂಗಗೊಂಡಿದೆ. ಇದರಿಂದಾಗಿ, ಭ್ರಷ್ಟಾಚಾರ, ನೈತಿಕತೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದ ಮೋದಿ ಅವರ ನಿಜವಾದ ಬಣ್ಣ ಏನು ಎಂಬುದು ಗೊತ್ತಾಗಿದೆ" ಎಂದು ಟೀಕಿಸಿದರು.

"ಚುನಾವಣಾ ಬಾಂಡ್ ರೂಪದಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಒಂದಷ್ಟು ಹಣ ಬಂದಿದೆ. ಆದರೆ, ಅದು ಸಹಜವಾಗಿ ಬಂದಿರುವಂತದ್ದು. ಅದು ಯಾವುದೇ ಇಡಿ, ಸಿಬಿಐ ಇನ್ನಿತರ ಸಂಸ್ಥೆಗಳನ್ನು ಬಳಸಿಕೊಂಡು ಬೆದರಿಕೆ ಹಾಕಿ ವಸೂಲಿ ಮಾಡಿರುವಂತದ್ದಲ್ಲ" ಎಂದು ಸಮರ್ಥಿಸಿಕೊಂಡರು.

"ಚುನಾವಣಾ ಬಾಂಡ್ ವಿಷಯ ಇಷ್ಟಕ್ಕೇ ನಿಲ್ಲುವುದಿಲ್ಲ. ಇದರ ಆಳ ಬಹಳ ಇದೆ. ಇದು ಇನ್ನೂ ಮುಂದುವರಿಯಲಿದೆ. ಚುನಾವಣಾ ಬಾಂಡ್​ಗೆ ಸಂಬಂಧಿಸಿದಂತೆ ಎಲ್ಲಾ ಪಕ್ಷಗಳನ್ನೂ ತನಿಖೆಗೆ ಒಳಪಡಿಸಲಿ. ಚುನಾವಣಾ ಬಾಂಡ್ ವ್ಯವಸ್ಥೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಸಾಧ್ಯ ಎಂದು ಭಾವಿಸಲಾಗಿತ್ತು. ಆದರೆ, ಇದರ ದುರುಪಯೋಗವೇ ಜಾಸ್ತಿಯಾಗಿದೆ" ಎಂದು ಹೇಳಿದರು.

"ಮನಮೋಹನ್ ಸಿಂಗ್ ಅವರಿಗೆ ಅಭಿವೃದ್ಧಿಯ ಬಗ್ಗೆ ಹಾಗೂ ಜನರ ಕಷ್ಟನಷ್ಟಗಳ ಬಗ್ಗೆ ನಿಜವಾದ ಕಾಳಜಿ ಇತ್ತು. ಪ್ರವಾಹ, ಬರ ಸೇರಿದಂತೆ ಯಾವುದೇ ನೈಸರ್ಗಿಕ ವಿಪತ್ತು ಉಂಟಾದಾಗ ಕರ್ನಾಟಕ ಸೇರಿದಂತೆ ದೇಶದ ಯಾವುದೇ ಸ್ಥಳಕ್ಕೆ ಖುದ್ದು ಭೇಟಿ ನೀಡುತ್ತಿದ್ದರು. ಆದರೆ, ಮೋದಿ ಅವರಿಗೆ ಇಂತಹ ನಿಜವಾದ ಕಾಳಜಿ ಇಲ್ಲ. ಹೀಗಾಗಿಯೇ, ರಾಜ್ಯದಲ್ಲಿ ಬರ ಇದ್ದಾಗ ಅವರು ಈ ಕಡೆ ಸುಳಿಯಲಿಲ್ಲ. ಈಗ, ಚುನಾವಣೆ ಎಂದ ತಕ್ಷಣ ಎರಡು ಸಲ ಇಲ್ಲಿಗೆ ಭೇಟಿಕೊಟ್ಟಿದ್ದಾರೆ" ಎಂದರು.

ಇದನ್ನೂ ಓದಿ:ರಾಜ್ಯದಲ್ಲಿ ಮೋದಿ ಪರ ಅಲೆ ಇದೆ, ಕಾಂಗ್ರೆಸ್​ನವರು ಅಭ್ಯರ್ಥಿಗಳನ್ನು ಹಾಕಲು ಯೋಚಿಸುತ್ತಿದ್ದಾರೆ: ವಿಜಯೇಂದ್ರ

ABOUT THE AUTHOR

...view details